ದ.ಕ.ದಲ್ಲಿ 1,844 ಮಂದಿಗೆ ಚಿಕಿತ್ಸೆ, 1.16 ಕೋ.ರೂ. ವೆಚ್ಚ: ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ
ಮಂಗಳೂರು, ಅ.20: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಎಪ್ರಿಲ್‌ನಿಂದ ಸೆಪ್ಟಂಬರ್ ಅಂತ್ಯದವರೆಗೆ 1,844 ಮಂದಿ ಚಿಕಿತ್ಸೆ ಪಡೆದಿದ್ದು, ಒಟ್ಟು 1.16 ಕೋ.ರೂ. ವೆಚ್ಚ ಮಾಡಲಾಗಿದೆ.
ಈ ಪೈಕಿ ಸರಕಾರಿ ಆಸ್ಪತ್ರೆಗಳಲ್ಲಿ 618 ಅಪಘಾತ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, 24.98 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳ ಪೈಕಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲೇ 580 ಮಂದಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, 24.68 ಲಕ್ಷ ರೂ. ವ್ಯಯಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 1,226 ಗಾಯಾಳುಗಳಿಗೆ ಈ ಯೋಜನೆಯನ್ವಯ ಚಿಕಿತ್ಸೆ ನೀಡಲಾಗಿದ್ದು, ಇದಕ್ಕಾಗಿ 91.76 ಲಕ್ಷ ರೂ.ನ್ನು ರಾಜ್ಯ ಸರಕಾರ ವೆ್ಚ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.
ರಾಜ್ಯದಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ಯಾವುದೇ ವ್ಯಕ್ತಿ/ಗಾಯಾಳುಗಳಿಗೆ ಅಂತಹ ಸಂಕಷ್ಟದ ಸೂಕ್ಷ್ಮ ಸಮಯದಲ್ಲಿ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಮುಖ್ಯಮಂತ್ರಿ ಸಾಂತ್ವನ-ಹರೀಶ್ ಯೋಜನೆಯ ಮುಖ್ಯ ಉದ್ದೇಶ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಮೊದಲ 48 ಗಂಟೆಗಳ ಅವಧಿಯಲ್ಲಿ 25,000 ರೂ.ವರೆಗೆ ಗಾಯಾಳುವಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಈ ಯೋಜನೆಯನ್ನು ರೂಪಿಸಿದ್ದಾರೆ.
ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು, ಸರಕಾರಿ ಮೆಡಿಕಲ್ ಕಾಲೇಜುಗಳು ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ನೋಂದಣಿಗೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ದೊರೆಯುತ್ತದೆ.
ಯೋಜನೆಗೆ ಒಳಪಡುವ ಆಸ್ಪತ್ರೆಗಳು
ಮಂಗಳೂರು ತಾಲೂಕು:
ವೆನ್ಲಾಕ್ ಜಿಲ್ಲಾಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ, ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲ್‌ಬೈಲ್, ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ, ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಕಣಚೂರು ಆಸ್ಪತ್ರೆ ದೇರಳಕಟ್ಟೆ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಗ್ಲೋಬಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಒಮೇಗಾ ಆಸ್ಪತ್ರೆ, ಯುನಿಟಿ ಆಸ್ಪತ್ರೆ, ಹೈಲಾಂಡ್ ಆಸ್ಪತ್ರೆ, ಇಂಡಿಯಾನ ಆಸ್ಪತ್ರೆ, ಮಂಗಳಾ ಆಸ್ಪತ್ರೆ, ಶ್ರೀನಿವಾಸ ಆಸ್ಪತ್ರೆ ಮುಕ್ಕ, ನೇತಾಜಿ ಎಲ್ಲಪ್ಪ ಆಸ್ಪತ್ರೆ ತೊಕ್ಕೊಟ್ಟು, ಸಹರಾ ಆಸ್ಪತ್ರೆ ತೊಕ್ಕೊಟ್ಟು. ಪುತ್ತೂರು ತಾಲೂಕು: ತಾಲೂಕು ಆಸ್ಪತ್ರೆ, ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಸಿಟಿ ಆಸ್ಪತ್ರೆ, ಮಹಾವೀರ ಮೆಡಿಕಲ್ ಸೆಂಟರ್, ಚೇತನಾ ಆಸ್ಪತ್ರೆ, ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆ ಹಾಗೂ ಉಪ್ಪಿನಂಗಡಿಯ ಧನ್ವಂತರಿ ಆಸ್ಪತ್ರೆ.
ಬಂಟ್ವಾಳ ತಾಲೂಕು: ತಾಲೂಕು ಆಸ್ಪತ್ರೆ, ಪುಷ್ಪರಾಜ್ ಆಸ್ಪತ್ರೆ ಕಲ್ಲಡ್ಕ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಸೋಮಯಾಜಿ ಆಸ್ಪತ್ರೆ ಬಿ.ಸಿ.ರೋಡ್, ಸುರಕ್ಷಾ ಆಸ್ಪತ್ರೆ ವಿಟ್ಲ.
ಬೆಳ್ತಂಗಡಿ ತಾಲೂಕು:
ತಾಲೂಕು ಆಸ್ಪತ್ರೆ, ಅಭಯ ಆಸ್ಪತ್ರೆ, ಶ್ರೀಕೃಷ್ಣ ಆಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ ಉಜಿರೆ, ಎಲ್.ಎಂ.ಪಿಂಟೊ ಹೆಲ್ತ್‌ಸೆಂಟರ್, ಬದ್ಯಾರ್. ಸುಳ್ಯ ತಾಲೂಕು: ತಾಲೂಕು ಆಸ್ಪತ್ರೆ, ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಳ್ಯ.





