‘ಕೆರೆ ಒತ್ತುವರಿ’ ಒಂದು ತಿಂಗಳಲ್ಲಿ ವರದಿ ಸಲ್ಲಿಕೆ: ಸ್ಪೀಕರ್ ಕೋಳಿವಾಡ
1,500 ಎಕರೆ ಕೆರೆ ಭೂಮಿ ಒತ್ತುವರಿ

ಬೆಂಗಳೂರು, ಅ. 20: ಬೆಂಗಳೂರು ನಗರದಲ್ಲಿನ ಕೆರೆ ಒತ್ತುವರಿಗೆ ಸಂಬಂಸಿದಂತೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದು, ಇನ್ನೊಂದು ತಿಂಗಳಲ್ಲಿ ವರದಿ ನೀಡಲಾಗುವುದು ಎಂದು ಸದನ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಗಳ ಜತೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಸುಮಾರು 1,500 ಎಕರೆಗಳಷ್ಟು ಕೆರೆ ಭೂಮಿ ಒತ್ತುವರಿಯಾಗಿದ್ದು, ಒತ್ತುವರಿದಾರರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಭಾವ ನಡೆಯದು: ಕೆರೆ ಭೂಮಿ ಒತ್ತುವರಿ ತೆರವಿಗೆ ಸರಕಾರಕ್ಕೆ ಶಿಾರಸು ಮಾಡಲಾಗುವುದು. ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವುದು ರಾಜ್ಯ ಸರಕಾರಕ್ಕೆ ಬಿಟ್ಟ ವಿಷಯ ಎಂದ ಅವರು, ನನ್ನ ಮೇಲೆ ಒತ್ತುವರಿದಾರರು ಸೇರಿದಂತೆ ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ.
ತಾನು ಸ್ಪೀಕರ್ ಸ್ಥಾನದಲ್ಲಿರುವವರೆಗೂ ಅದು ಯಾರಿಂದಲೂ ಸಾಧ್ಯವಿಲ್ಲ. ತನ್ನ ವಿರುದ್ಧ ಪ್ರತಿಕ್ರಿಯೆ ನೀಡುವವರಿಗೆ ತಾನು ಏನೂ ಹೇಳುವುದಿಲ್ಲ ಎಂದ ಕೋಳಿವಾಡ್, ಕೆರೆ ಒತ್ತುವರಿ, ರಾಜಕಾಲುವೆ ಮತ್ತು ಬರ್ ರೆನ್ ಒತ್ತುವರಿ ಸಂಬಂಧ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ, ಬರ್‌ರೆನ್ ಬಗ್ಗೆ ಇನ್ನೂ ಮಾಹಿತಿ ಬರಬೇಕಿದೆ.
ರಾಜಕಾಲುವೆ ಮತ್ತು ಬರ್‌ರೆನ್ ಬಗ್ಗೆ ಇನ್ನೂ ಮಾಹಿತಿ ಸಂಗ್ರಹಿಸುವ ಅಗತ್ಯವಿದ್ದು, ಇನ್ನು ಎರಡು ಅಥವಾ ಮೂರು ತಿಂಗಳಲ್ಲಿ ಸರಕಾರಕ್ಕೆ ಆ ವರದಿಯನ್ನು ಸಲ್ಲಿಸಲಾಗುವುದು. ರಾಜಕಾಲುವೆ ಭೂಮಿ ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಿದ್ದರೂ, ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಸೂಚಿಸಿದರು.
ಪರಿಶೀಲನೆ: ಕೆರೆ ಭೂಮಿ ಒತ್ತುವರಿ ಸಂಬಂಧ ಅ.25 ಮತ್ತು 26ರಂದು ಇಲ್ಲಿನ ಜೆಪಿ ನಗರದ ಪುರವಂಕರ, ಸಿಂಬೋಸಿಸ್ ಬೆಂಗಳೂರು ಈಸ್ಟ್, ಬಾಗಮನೆ ಟೆಕ್ ಪಾರ್ಕ್ ಬೈರಸಂದ್ರ ಕೆರೆ, ಕೆಆರ್ ಪುರದ ವಿಆರ್ ಬೆಂಗಳೂರು ಮಾಲ್, ಕಾರ್ಲೆ ಕಂಪೆನಿ ಮಾನ್ಯತಾ ಟೆಕ್ ಪಾರ್ಕ್, ದಾಸರಹಳ್ಳಿ ಮತ್ತು ಕೆರೆ ದತ್ತು ಪಡೆದ ಎಂಬೆಸಿ ಗ್ರೂಪ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸದನ ಸಮಿತಿ ಭೇಟಿ ನೀಡಿ ಪರಿಶೀಲಿಸಲಿದೆ ಎಂದರು.







