ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಾತ್ಕಾಲಿಕ ಕ್ರಮ: ಡಾ.ರಾಜೇಂದ್ರ ಕೆ.ವಿ.
ಉಪ್ಪಿನಂಗಡಿ, ಅ.20: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಸೂಕ್ತ ಜಮೀನು ದೊರೆಯುವವರೆಗೆ ಈಗಿನ ಬಸ್ ನಿಲ್ದಾಣ ಸಮೀಪ ಅರಣ್ಯ ಇಲಾಖೆಗೆ ವಸತಿ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಗುರುವಾರ ನಡೆದ ನಾಗರಿಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಬೆಳೆಯುತ್ತಿರುವ ಉಪ್ಪಿನಂಗಡಿ ಪಟ್ಟಣಕ್ಕೆ ಗ್ರಾಪಂ ಅಧೀನದ ಬಸ್ ನಿಲ್ದಾಣ ಸಾಕಾಗುತ್ತಿಲ್ಲ. ವಾಹನ ದಟ್ಟನೆ ದಿನೇ ದಿನೇ ಹೆಚ್ಚುತ್ತಿದ್ದು, ಸಮಸ್ಯೆ ಬಿಗಡಾಯಿಸುತ್ತಿದೆ. ಈ ಕುರಿತು ಸಮರ್ಪಕ ಯೋಜನೆ ಅನುಷ್ಠಾನಿಸಲು ನಾಗರಿಕರು ಸಲಹೆ ಸೂಚನೆ ನೀಡಬೇಕು ಎಂದರು.
ಸರಕಾರಿ ಭೂಮಿ ಎಲ್ಲಿದೆ ಎಂದು ಮಾಹಿತಿ ನೀಡುವುದು ಮಾತ್ರವಲ್ಲ. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಲ್ಲಿ ಅದರ ಬಗ್ಗೆಯೂ ಮಾಹಿತಿ ನೀಡಬೇಕೆಂದು ವಿನಂತಿಸಿದ ಅವರು, ಉಪ್ಪಿನಂಗಡಿ ಪೇಟೆಯೊಳಗೆ ಅಥವಾ ಹೊರಗೆ ಸರಕಾರಿ ಭೂಮಿಯನ್ನು ಭವಿಷ್ಯದ ಉದ್ದೇಶಕ್ಕೆ ಮೀಸಲಿರಿಸುವ ಅಗತ್ಯತೆ ಇದೆ ಎಂದರು.
ತಮ್ಮ ತಮ್ಮ ಅಂಗಡಿ ಮುಂದೆ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ತರಕಾರಿ ವ್ಯಾಪಾರಿಯೋರ್ವರು ಆಗ್ರಹಿಸಿದಾಗ, ಬಹುತೇಕ ವ್ಯಾಪಾರಿಗಳು ರಸ್ತೆ ಮಾರ್ಜಿನ್ ಹಾಗೂ ಚರಂಡಿಯನ್ನು ಕಬಳಿಸಿ ಸಾಮಾನು ಮತ್ತು ದಾಸ್ತಾನು ಇರಿಸುವ ಬಗ್ಗೆ ಪಂಚಾಯತ್ ಅಧ್ಯಕ್ಷರು ಎಸಿ ಅವರ ಗಮನ ಸೆಳೆದರು. ರಸ್ತೆ ಮಾರ್ಜಿನ್ ತೆರವುಗೊಳಿಸಲು ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಎಸಿ ಆದೇಶಿಸಿದರು.
ರಸ್ತೆಯಲ್ಲಿ ಪ್ರಯಾಣಿಕರನ್ನು ಪಿಕಪ್ ಮಾಡುವ ಕೃತ್ಯವನ್ನು ದಂಡನೆಗೆ ಗುರಿಪಡಿಸಬೇಕೆಂದು ಆದೇಶಿಸಿದ ಎಸಿ ಅವರು, ನಿಯಮ ಪಾಲನೆ ಬಗ್ಗೆ ಸಾರ್ವಜನಿಕರು ಅರಿವು ಹೊಂದಿರಬೇಕಾದ ಅಗತ್ಯತೆ ಇದೆ. ಯಾವುದೇ ಕಟ್ತಡ ನಿರ್ಮಿಸುವ ಮುನ್ನ ಪಾರ್ಕಿಂಗ್ ವ್ಯವಸ್ಥೆಗೆ ಭೂಮಿ ಕಾಯ್ದಿರಿಸಿ ಕಟ್ಟಡ ಕಟ್ಟಲು ಅನುಮತಿ ನೀಡಬೇಕು. ಈ ಬಗ್ಗೆ ನಿಯಮ ಉಲ್ಲಂಘನೆಯಾದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಉಪ್ಪಿನಂಗಡಿ ಹೆದ್ದಾರಿಯಿಂದ ಪೇಟೆಗೆ ಬಳಕೆಯಾಗುತ್ತಿದ್ದ ಕಾಲು ದಾರಿಯನ್ನು ಊರ್ಜಿತದಲ್ಲಿರಿಸಬೇಕೆಂದು ನಾಗರಿಕರು ಆಗ್ರಹಿಸಿದರು. ಆರ್‌ಟಿಒ ಅಧಿಕಾರಿ ಶ್ರೀಧರ್ ರಾವ್, ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್, ಎಸ್ಸೈ ರತನ್ ಕುಮಾರ್, ತಾಪಂ ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ ಭಾಗವಹಿಸಿದ್ದರು.
ಅನಂತರಾಯ ಕಿಣಿ, ಸೇಸಪ್ಪ ನೆಕ್ಕಿಲು, ಕೈಲಾರ್ ರಾಜ್ ಗೋಪಾಲ ಭಟ್, ಅಶ್ರಫ್ ಬಸ್ತಿಕಾರ್, ಪ್ರಶಾಂತ್ ಡಿಕೋಸ್ತ, ಅಯೂಬ್, ರವಿಕಿರಣ್, ಜಗದೀಶ್ ಶೆಟ್ಟಿ, ಮೊಯ್ದಿನ್ ಕುಟ್ಟಿ, ಝಕರಿಯಾ, ದಿನಕರ ರೈ, ವಿಜಯಕುಮಾರ್ ಕಲ್ಲಳಿಕೆ, ಸೋಮಾಥ, ಮಂಜುನಾಥ್ ಉಪಸ್ಥಿತರಿದ್ದರು.





