ನ.1-2: ಕಾಂತಾವರ ಉತ್ಸವ-2016
ಮೂಡುಬಿದಿರೆ, ಅ.20: ಕಾಂತಾವರ ಕನ್ನಡ ಸಂಘವು ಇದೀಗ ನಲ್ವತ್ತರ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನ.1 ಮತ್ತು 2ರಂದು ಕಾಂತಾವರ ಉತ್ಸವ-2016 ಸಂಭ್ರಮ ಕಾಂತಾವರದ ಕನ್ನಡ ಭವನದಲ್ಲಿ ಜರಗಲಿದೆ.
ನ.1ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾಂತಾವರ ಉತ್ಸವದಲ್ಲಿ ನಿಟ್ಟೆ ವಿವಿಯ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರಿಗೆ ಕರ್ನಾಟಕ ಏಕೀಕರಣ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಡಾ.ಗಿರೀಶ್ ಕಾಸರವಳ್ಳಿ ಮಹಾ ಸಂಪುಟ ‘ಸಂಘ ಜಂಗಮ’ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಹನುಮಾನ್ ಗ್ರೂಪ್ ಆಫ್ ಕನ್‌ಸರ್ನ್ಸ್‌ನ ಚೇರಮೇನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ವಿಲಾಸ್ ನಾಯಕ್ ಸಂಘದ ವೆಬ್‌ಸೆಟ್‌ನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮಧ್ಯಾಹ್ನ 2ರಿಂದ 4ರವರೆಗೆ ‘ತಬರನ ಕತೆ’ ಚಲನಚಿತ್ರ ಪ್ರದರ್ಶನ, ಸಂಜೆ 4ರಿಂದ ಡಾ.ಗಿರೀಶ್ ಕಾಸರವಳ್ಳಿ ಅವರಿಂದ ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ಸುಬ್ರಾಯ ಚೊಕ್ಕಾಡಿ, ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ.ಬಿ.ಜನಾರ್ದನ ಭಟ್, ವಿ.ಗ.ನಾಯಕ, ಮೋಹನ ಸೋನಾ, ಕಲ್ಲೂರು ನಾಗೇಶ್, ನರೇಂದ್ರ ಪೈ, ಛಾಯಾಗ್ರಾಹಕ ದೇವಾನಂದ ಭಟ್ ಅವರನ್ನು ಸನ್ಮಾನಿಸಲಾಗುತ್ತದೆ. ಸಂಜೆ 4:30ರಿಂದ ಡಾ. ಗಿರೀಶ್ ಕಾಸರವಳ್ಳಿ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. 2016ರ ದತ್ತಿ ಪ್ರಶಸ್ತಿ ಪ್ರದಾನ: ನ.2ರಂದು ಬೆಳಗ್ಗೆ 10ರಿಂದ ಸಂಸ್ಕೃತಿ ಚಿಂತಕ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಬೆಂಗಳೂರಿನ ಡಾ.ಗಿರೀಶ್ ಕಾಸರವಳ್ಳಿ ಅವರಿಗೆ ಕಾಂತಾವರ ಲಲಿತಕಲಾ ಪುರಸ್ಕಾರ, ಡಾ.ಮುದ್ದು ಮೋಹನ್ ಬೆಂಗಳೂರು ಅವರಿಗೆ ಕಾಂತಾವರ ಸಂಗೀತ ಕಲಾ ಪುರಸ್ಕಾರ, ಡಾ. ಎಂ.ರಾಮ್ ತ್ರಿವೆಂಡ್ರಂ ಅವರಿಗೆ ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರ, ಡಾ.ಸಂಗಮೇಶ್ ಸವದತ್ತಿಮಠ, ಧಾರವಾಡ ಅವರಿಗೆ ವಿದ್ವತ್ ಪರಂಪರಾ ಪುರಸ್ಕಾರ, ಹೈದ್ರಾಬಾದ್‌ನ ಶಾಖಮೂರು ರಾಮಗೋಪಾಲ್ ಅವರಿಗೆ ಕಾಂತಾವರ (ಅನುವಾದ) ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2ರಿಂದ ಡಾ.ಮುದ್ದು ಮೋಹನ್ ಅವರ ಸಂಗೀತ ಸೌರಭ, ಬಳಿಕ ಪ್ರೊ.ಕೆ.ಇ.ರಾಧಾಕೃಷ್ಣ ಅವರಿಂದ ಅಮರನಾಥಯಾತ್ರೆಯ ಅನುಭವಕಥನ ನಡೆಯಲಿದೆ.
‘ನಾಡಿಗೆ 176 ನಮಸ್ಕಾರ’
ನಾಡು ನುಡಿಯ ಸೇವೆಯಲ್ಲಿ ಮಹಾನ್ ಸಾಧಕರೆನಿಸಿದ ಅವಿಭಜಿತ ದ.ಕ. ಜಿಲ್ಲೆಯ ಸಾಧಕರನ್ನು ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಮೂಲಕ ಪರಿಚಯಿಸುವ ವಿನೂತನ ಪ್ರಯತ್ನ ಕನ್ನಡ ಸಂಘದಿಂದ ನಡೆದಿದೆ.
ಈವರೆಗೆ 162 ಕೃತಿಗಳು ಬಿಡುಗಡೆಯಾಗಿದ್ದು, ಇದೀಗ ಮತ್ತೆ 12 ಕೃತಿಗಳು ಈ ಬಾರಿ ಲೋಕಾರ್ಪಣೆಯಾಗಲಿದೆ ಎಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.





