ಲೋಧಾ ಸಮಿತಿಯ ಶಿಫಾರಸ್ಸುಗಳ ಜಾರಿಗೆ ಬಿಸಿಸಿಐಗೆ ಎರಡು ವಾರಗಳ ಗಡು ವಿಧಿಸಿದ ಸುಪ್ರೀಂ

ಹೊಸದಿಲ್ಲಿ, ಅ.21: ಲೋಧಾ ಸಮಿತಿಯ ಶಿಫಾರಸುಗಳ ಜಾರಿಗೆ ಸುಪ್ರೀಂ ಕೋರ್ಟ್ ಇಂದು ಬಿಸಿಸಿಐಗೆ ಎರಡು ವಾರಗಳ ಗಡು ವಿಧಿಸುವ ಮೂಲಕ ಕಡಕ್ ಎಚ್ಚರಿಕೆ ನೀಡಿದೆ.
ಇದೇ ವೇಳೆ ಸುಪ್ರೀಂ ಕೋರ್ಟ್ ಬಿಸಿಸಿಐಗೆ ತನ್ನ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ.
ಜುಲೈ 18ರಂದು ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಜಾರಿಗೊಳಿಸಿರುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಡಿ.3ರಂದು ಅಫಿಡಾವಿಟ್ ಸಲ್ಲಿಸುವಂತೆ ಆದೇಶ ನೀಡಿದೆ.
ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೂ ಕೋರ್ಟ್ ಆದೇಶದ ಬಗ್ಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.ಮಾಧ್ಯಮ ಹಕ್ಕು, ಒಪ್ಪಂದಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಆಡಿಟರ್ ನೇಮಿಸಬೇಕು ಎಂದು ಲೋಧಾ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ
Next Story





