ಪಾಕಿಸ್ತಾನಿಯೆಂದು ಹೊಡೆದ ಪೊಲೀಸರು

ತಲಶ್ಶೇರಿ, ಅಕ್ಟೋಬರ್ 21: ರಾತ್ರೆವೇಳೆ ಅಂಗಡಿ ಬಂದ್ ಮಾಡಿ ಮನೆಗೆ ಬಸ್ಸಿನಿಂದ ಇಳಿದು ಹೋಗುತ್ತಿದ್ದ ಯುವಕನನ್ನು ನೀನು ಪಾಕಿಸ್ತಾನಿ ಎಂದು ಹೇಳಿ ಮಾರಣಾಂತಿಕವಾಗಿ ಹೊಡೆದ ಘಟನೆ ತಲಶ್ಶೇರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಾಯಾಳುವನ್ನು ಇಲ್ಲಿನ ನಾಯನಾರ್ ರಸ್ತೆಯ ಮುಹಮ್ಮದ್ ಅಫ್ರೋಝ್(26) ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತಲಶ್ಶೇರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬುಧವಾರ ರಾತ್ರಿ ಹತ್ತೂವರೆ ಗಂಟೆಗೆ ನಾಯನಾರ್ ರಸ್ತೆಯಲ್ಲಿ ಬಸ್ಸಿನಿಂದಿಳಿದು ಮನೆಕಡೆ ಹೊರಟಿದ್ದ ಅಫ್ರೋಝ್ ರನ್ನು ತಡೆದು ನಿಲ್ಲಿಸಿದ ಇಬ್ಬರು ಪೊಲೀಸರು ಪ್ರಶ್ನಿಸಿದ್ದು, ಕೈಯಲ್ಲಿದ್ದ ಚೀಲವನ್ನು ತಪಾಸಣೆ ಮಾಡಿ ಹೋಗಗೊಟ್ಟಿದ್ದಾರೆ.
ಆದರೆ ಸ್ವಲ್ಪ ಮುಂದಕ್ಕೆ ನಡೆದು ಹೋದಾಗ ಅಲ್ಲಿ ಜೀಪ್‌ನಲ್ಲಿದ್ದ ಎಸ್ಸೈ ಮತ್ತು ಕೆಲವು ಪೊಲೀಸರು ತಡೆದು ನಿಲ್ಲಿಸಿ ಮತ್ತೊಮ್ಮೆ ಅಫ್ರೋಝ್ ರನ್ನು ಪ್ರಶ್ನಿಸಿದ್ದಾರೆ. ಮನೆಗೆ ಹೋಗುತ್ತಿದ್ದೇನೆಂದು ಹೇಳಿದರು ಗಡ್ಡ ಹಿಡಿದು ದೂಡಿ ಹಾಕಿದ್ದಾರೆ. ನೀನು ಪಾಕಿಸ್ತಾನಿ ಅಲ್ಲವೇ ಎಂದು ಬೈದ ಎಸ್ಸೈ ಮತ್ತು ಪೊಲೀಸರು ಹೊಟ್ಟೆಗೆ ತುಳಿದರು, ಲಾಟಿಯಿಂದ ಹೊಡೆದರು ಎಂದು ಅಫ್ರೋಝ್ ಹೇಳಿದ್ದಾರೆ. ಕೆಳಗೆ ಬಿದ್ದ ಬಳಿಕವೂ ಹೊಡೆಯುವುದನ್ನು ಮುಂದುವರಿಸಿದ ಪೊಲೀಸರು ನಂತರ ಜೀಪಿಗೆ ಎತ್ತಿಹಾಕಿ ತನ್ನನ್ನು ಠಾಣೆಗೆ ಕರೆದೊಯ್ದರು ಎಂದು ಅಫ್ರೋಝ್ ತಿಳಿಸಿದ್ದಾರೆಂದು ವರದಿ ತಿಳಿಸಿದೆ.







