ವಿಧಾನಸೌಧದೊಳಗೆ 2.5 ಕೋಟಿ ಸಮೇತ ತೆರಳುತ್ತಿದ್ದ ವಕೀಲನ ಬಂಧನ

ಬೆಂಗಳೂರು,ಅ.21: ವಿಧಾನಸೌಧ ಆವರಣದೊಳಗೆ 2.40 ಕೋಟಿ ರೂ.ನಗದು ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಾಸಗಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಸಿದ್ಧಾರ್ಥ ಎಂಬ ಧಾರವಾಡ ಮೂಲದ ವಕೀಲರೇ ಇದೀಗ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ. ವಿಧಾನಸೌಧ ಠಾಣಾ ಪೊಲೀಸರು ಸದ್ಯ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ವಿಧಾನಸೌಧದ ಪಶ್ಚಿಮ ದ್ವಾರ (ಕೆಂಗಲ್ ಹನುಮಂತಯ್ಯ ದ್ವಾರ)ದ ಬಳಿ ತಪಾಸಣೆ ಸಂದರ್ಭದಲ್ಲಿ ಅಲ್ಲಿದ್ದ ವಿಧಾನಸೌಧ ಸಿಬ್ಬಂದಿಗೆ ಕಾರಿನಲ್ಲಿದ್ದ ನಗದು ಪತ್ತೆಯಾಗಿದೆ. ಮೂರು ಬಾಕ್ಸ್ಗಳಲ್ಲಿ ಹಣ ತುಂಬಿಸಿಕೊಂಡು ಸಿದ್ದಾರ್ಥ ತಮ್ಮ ವೋಕ್ಸ್ ವ್ಯಾಗನ್ ಕಾರಿನಲ್ಲಿ ವಿಧಾನಸೌಧದಕ್ಕೆ ಆಗಮಿಸಿದ್ದರು.
ಸಚಿವರಿಗೆ ನೀಡಲು ತಂದಿದ್ದ ಹಣ
ಪೊಲೀಸರ ವಿಚಾರಣೆ ಸಂದರ್ಭ ಸಿದ್ಧಾರ್ಥ ಈ ಹಣವನ್ನು ಟೆಂಡರ್ ಒಂದರ ಸಂಬಂಧ ಸಚಿವರೊಬ್ಬರಿಗೆ ನೀಡಲು ಹಣ ತಂದಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು ಕೇಂಧ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್, ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಯೋಗೀಶ್ ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರತಿ ವಾಹನವನ್ನೂ ತೀವ್ರ ತರದಲ್ಲಿ ತಪಾಸಣೆಗೆ ಒಳಪಡಿಸಿ ಬಿಡಲು ಸೂಚಿಸಿದ್ದು, ಅನುಮಾನ ಬಂದವರನ್ನು ಕೂಡಲೇ ವಶಕ್ಕೆ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.







