ಪತ್ನಿಯ ಆತ್ಮಹತ್ಯೆ ಪ್ರಕರಣ : ರಾಷ್ಟ್ರೀಯ ಕಬಡ್ಡಿ ಆಟಗಾರ ಚಿಲ್ಲರ್ ಬಂಧನ

ಹೊಸದಿಲ್ಲಿ, ಅ.21: ವರದಕ್ಷಿಣೆ ಕಿರುಕುಳದಿಂದ ದಿಲ್ಲಿಯ ತನ್ನ ಮನೆಯಲ್ಲಿ ಪತ್ನಿ ಲಲಿತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ಬಳಿಕ, ಪತಿ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ರೋಹಿತ್ ಚಿಲ್ಲರ್‌ರನ್ನು ಮುಂಬೈಯಿಂದ ಬಂಧಿಸಲಾಗಿದೆ.
ಪ್ರೊ-ಕಬಡ್ಡಿ ಲೀಗ್ ಆಟಗಾರನ 27ರ ಹರೆಯದ ಹೆಂಡತಿ ಒಂದು ಆಡಿಯೊ ಸಂದೇಶ ಹಾಗೂ ಪತ್ರವನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ ‘‘ಇದರಿಂದ ಪಾರಾಗುವಷ್ಟು ತಾನು ಶಕ್ತಳಾಗಿಲ್ಲ, ನಾನು ಮುಕ್ತಳಾಗಲು ನಿರ್ಧರಿಸಿದ್ದೇನೆ’’ ಎಂದವರು ತಿಳಿಸಿದ್ದಾರೆ.
26ರ ಹರೆಯದ ಚಿಲ್ಲರ್ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆಯ ಆರೋಪ ದಾಖಲಿಸಲಾಗಿದ್ದು, ಅವರನ್ನಿಂದು ದಿಲ್ಲಿಯ ನ್ಯಾಯಾಲಯವೊಂದಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ.
ಪಶ್ಚಿಮ ದಿಲ್ಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಲಲಿತಾ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ದುಪಟ್ಟಾದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದುದನ್ನು ಅವರ ತಂದೆ ಸೋಮವಾರ ಸಂಜೆ ಕಂಡಿದ್ದರು.
ಲಲಿತಾ ತನ್ನ ಗಂಡನಿಗಾಗಿ 2 ತಾಸು ಉದ್ದ ಆಡಿಯೊ ಸಂದೇಶ ರೆಕಾರ್ಡ್ ಮಾಡಿದ್ದು, ಕುಟುಂಬಕ್ಕಾಗಿ ಕಿರು ಸಂದೇಶ ದಾಖಲಿಸಿದ್ದರು. ಚಿಲ್ಲರ್ ಹಾಗೂ ಅವರ ಕುಟುಂಬಿಕರು ವರದಕ್ಷಿಣೆಗಾಗಿ ತನಗೆ ಹಿಂಸೆ ನೀಡುತ್ತಿದ್ದಾರೆ, ಚುಚ್ಚು ಮಾತು ಆಡುತ್ತಿದ್ದಾರೆ ಹಾಗೂ ಹೊಡೆಯುತ್ತಿದ್ದಾರೆಂದು ಲಲಿತಾ ಆತ್ಮಹತ್ಯೆ ಸಂದೇಶದಲ್ಲಿ ಆರೋಪಿಸಿದ್ದಾರೆ.
ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚಿಲ್ಲರ್‌ರನ್ನು ಲಲಿತಾ ಮಾರ್ಚ್‌ನಲ್ಲಿ ವಿವಾಹವಾಗಿದ್ದರು. ಇದು ಅವರಿಗೆ 2ನೆ ಸಂಬಂಧವಾಗಿತ್ತು. 2009ರಲ್ಲಿ ನೌಕಾಪಡೆ ಸೇರಿದ್ದ ಚಿಲ್ಲರ್, ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು.







