ಫರಂಗಿಪೇಟೆ ಸರಣಿ ಅಪಘಾತ: ಅಕ್ರಮ ಮರಳು ಸಾಗಾಟದ ಲಾರಿಯ ಚಾಲಕನಿಗೆ ಗಾಯ

ಬಂಟ್ವಾಳ, ಅ. 21: ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಅಕ್ರಮ ಮರಳು ಸಾಗಟದ ಟಿಪ್ಪರ್ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಪರಿಣಾಮ ಹೆದ್ದಾರಿಯಲ್ಲಿ ಕೆಲವತ ಹೊತ್ತುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ಎದುರಿನಲ್ಲಿ ಯೂ ಟರ್ನ್ ತೆಗೆಯುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಚಾಲಕ ಹಠಾತನೆ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಈಚರ್ ಲಾರಿ ಚಾಲಕ ಕೂಡಾ ಬ್ರೇಕ್ ಹಾಕಿದ್ದಾನೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮರಳನ್ನು ಹೇರಿಕೊಂಡು ಬಿ.ಸಿ.ರೋಡಿನತ್ತ ಶರವೇಗದಲ್ಲಿ ಧಾವಿಸುತ್ತಿದ್ದ ಟಿಪ್ಪರ್ ಈಚರ್ ಲಾರಿಗೆ ಹಿಂದಿನಿಂದ ಬಡಿದಿದೆ.
ಪರಿಣಾಮ ಟಿಪ್ಪರ್ ಚಾಲಕನ ಕಾಲಿನ ಭಾಗಕ್ಕೆ ಗಂಭೀರ ಗಾಯಗೊಂಡಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುವಿನ ಹೆಸರು, ವಿಳಾಸ ತಕ್ಷಣಕ್ಕೆ ಲಭ್ಯವಾಗಿಲ್ಲ.
ಅಪಘಾತಕ್ಕೊಳಗಾದ ಟಿಪ್ಪಿರ್ ಲಾರಿ ನಡು ರಸ್ತೆಯಲ್ಲೇ ನಿಂತಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತು. ಅಲ್ಲೇ ವಾಹನಗಳ ತಪಾಸಣಾ ಕಾರ್ಯದಲ್ಲಿದ್ದ ಬಂಟ್ವಾಳ ಟ್ರಾಫಿಕ್ ಠಾಣೆ ಎಸ್ಸೈ ಚಂದ್ರಶೇಖರಯ್ಯ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.
ಸಾರ್ವಜನಿಕರ ಆಕ್ರೋಶ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್, ಲಾರಿಗಳು ನಿರಾತಂಕವಾಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಾಡುತ್ತಿದ್ದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಫರಂಗಿಪೇಟೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲವೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಜಿಲ್ಲೆಯಲ್ಲಿ ಮರಳುಗಾರಿಕೆ, ಸಾಗಟಕ್ಕೆ ನಿಷೇಧವಿದ್ದರೂ ರಾಜರೋಷವಾಗಿ ಮರಳುಗಾರಿಕೆ ನಡೆಯುತ್ತಿದೆ.ಪೊಲೀಸರು, ಗಣಿ ಮತ್ತು ಕಂದಾಯ ಇಲಾಖೆ ಮರಳು ಲಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅಪರೂಪಕ್ಕೊಮ್ಮೆ ಲೆಕ್ಕ ಭರ್ತಿಗಾಗಿ ಮರಳು ಲಾರಿಗಳನ್ನು ವಶಪಡಿಸಿ ಆಗಲೆ ಕನಿಷ್ಠ ದಂಡ ವಸೂಲಿ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಇದು ಮರಳು ದಂಧೆ ಕೋರರಿಗೆ ಹೊರೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಪರಿಶೀಲನೆ ನಡೆಸಿದರು.







