ಅಪ್ರಾಪ್ತ ಬಾಲಕಿಗೆ ಗರ್ಭದಾನ : ಆರೋಪಿ ಬಾಲಕನಿಗಾಗಿ ಶೋಧ
ಬಂಟ್ವಾಳ, ಅ. 21: ಅಪ್ರಾಪ್ತ ಬಾಲಕನೊಂದಿಗೆ ಕೆಲವು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿ ಮನೆಗೆ ವಾಪಸ್ ಆದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಲ ಠಾಣಾ ವ್ಯಾಪ್ತಿಯ 14 ವರ್ಷದ ಬಾಲಕಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕ ಕೆಲವು ಸಮಯದ ಹಿಂದೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದ್ದು ಇಬ್ಬರೂ ಸಂಬಂಧಿಗಳಾಗಿದ್ದರಿಂದ ಮನೆಯವರು ಯಾವುದೇ ನಾಪತ್ತೆ ಪ್ರಕರಣ ದಾಖಲಿಸಲು ಮುಂದಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಬಾಲಕಿ ಮನೆಗೆ ಹಿಂದಿರುಗಿದ್ದು, ಬಾಲಕಿಯ ತಾಯಿ ಅನುಮಾನದ ಮೇರೆಗೆ ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಬಾಲಕಿಯನ್ನು ತಪಾಸಣೆ ನಡೆಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿ 2 ತಿಂಗಳ ಗರ್ಭಿಣಿಯಾದ್ದಾಳೆ ಎಂದು ಆಕೆಯನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದರು. ತದ ನಂತರ ಬಾಲಕಿಯನ್ನು ಅದೇ ಆಸ್ಪತ್ರೆಯಲ್ಲಿ ದಾಖಲಿಸಿ ಕೌನ್ಸಿಂಗ್ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಬಳಿಕ ಬಾಲಕ ತಲೆ ಮರೆಸಿಕೊಂಡಿದ್ದು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ವಿಟ್ಲ ಠಾಣೆ ಪೊಲೀಸರು ಆರೋಪಿ ಬಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.





