ವಿದ್ಯಾರ್ಥಿಯಿಂದ ಪ್ರಾಂಶುಪಾಲರಿಗೆ ಹಲ್ಲೆ ಆರೋಪ : ಕ್ರಮಕ್ಕೆ ಕ್ಯಾಥಲಿಕ್ ಸಭಾ ಒತ್ತಾಯ
ಮಂಗಳೂರು, ಅ. 21: ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್‌ರ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿರುವ ಕ್ಯಾಥಲಿಕ್ ಸಭಾ ಮಂಗಳೂರು ಪ್ರದೇಶ ಘಟಕವು ತಪ್ಪಿತಸ್ಥ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆಗ್ರಹಿಸಿದೆ. ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅನಿಲ್ ಲೋಬೊ, ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ಗೌರವಿಸಲ್ಪಡುವ ಪರಂಪರೆ ಇರುವ ಸಮಾಜದಲ್ಲಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದು ನಾಚಿಕೆಗೇಡು. ವಿದ್ಯಾರ್ಥಿಗಳ ತಪ್ಪಿಗೆ ಏರುಧ್ವನಿಯಲ್ಲಿಮಾತನಾಡಿದರೆ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಸರಕಾರ, ಶಿಕ್ಷಕರ ಮೇಲೆ ಹಲ್ಲೆ ನಡೆಸಿದರೆ ನಿಯಮ ರೂಪಿಸಿಲ್ಲ ಎಂದರು.
ಮುಂದಿನ ಮೂರು ದಿನಗಳೊಳಗೆ ತಪ್ಪಿತಸ್ಥ ವಿದ್ಯಾರ್ಥಿಯ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸುವುದಾಗಿ ಅನಿಲ್ ಲೋಬೊ ಎಚ್ಚರಿಕೆ ನೀಡಿದರು.
ಹಾಜರಾತಿ ಪುಸ್ತಕ ಹರಿದುಹಾಕಿದ್ದ!
ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿರುವ ಬಿಬಿಎ ವಿದ್ಯಾರ್ಥಿಯ ಈ ಹಿಂದೆಯೂ ಹಾಜರಾತಿ ಪುಸ್ತಕದ ಹಾಳೆಯನ್ನು ಹರಿದು ಹಾಕಿದ್ದ ಎಂದು ಮಿಲಾಗ್ರಿಸ್ ಕಾಲೇಜು ಸ್ಟೂಡೆಂಟ್ ಯೂನಿಯನ್‌ನ ಅಧ್ಯಕ್ಷೆ ಮಲಿಟಾ ಪಾಯ್ಸೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಥಲಿಕ್ ಸಭಾ ಮಂಗಳೂರು ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ವಾಲ್ಟರ್ ಮೋನಿಸ್, ಕೆಥೊಲಿಕ್ ಸಭಾ ಕೇಂದ್ರೀಯ ರಾಜಕೀಯ ಸಮಿತಿಯ ಸಂಚಾಲಕ ಗೊಡ್ವಿನ್ ಪಿಂಟೊ, ಐಸಿವೈಎಂ ಮಂಗಳೂರು ಇದರ ಅಧ್ಯಕ್ಷ ಜಾಕ್ಸನ್ ಹೆರಿಕ್ ಡಿಕೋಸ್ತಾ, ಪಾದುವಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಶೆಲ್ಡನ್ ಕ್ರಾಸ್ತಾ, ಮಿಲಾಗ್ರಿಸ್ ಡಿಗ್ರಿ ಕಾಲೇಜು ಪಿಟಿಎ ಕಮಿಟಿಯ ಅಧ್ಯಕ್ಷ ರೊನಾಲ್ಡ್ ಪಿಂಟೊ ಉಪಸ್ಥಿತರಿದ್ದರು.







