ಸ್ಫೋಟಕ ಸಿಡಿದು ದನ ಸಾವು ಪ್ರಕರಣ : ಮತ್ತೊಬ್ಬ ಆರೋಪಿಯ ಬಂಧನ

ಬಂಟ್ವಾಳ, ಅ. 21: ಕಾಡು ಪ್ರಾಣಿಗಳ ಬೇಟೆಗಾಗಿ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಚೆಲ್ಲಂಗಾರು ಗುಡ್ಡದಲ್ಲಿ ಇರಿಸಿದ್ದ ಸ್ಫೋಟಕ ಸಿಡಿದು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ಇರ್ದೆಯಲ್ಲಿ ಬಂಧಿಸಿದ್ದಾರೆ. ದೂಮಡ್ಕ ಚೂರಿಮೂಲೆ ನಿವಾಸಿ ರಿಕ್ಷಾ ಚಾಲಕ ವಿಜಯ ಜಾನ್(30) ಬಂಧಿತ ಆರೋಪಿ. ಪುತ್ತೂರು ತಾಲೂಕಿನ ಇರ್ದೆಯಲ್ಲಿ ತಯಾರಿಸಿದ ಸ್ಫೋಟಕವನ್ನು ರಿಕ್ಷಾದಲ್ಲಿ ಸಾಗಾಟಕ್ಕೆ ಸಹಕರಿಸಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಸ್ಪೋಟಕ ಸಾಗಾಟಕ್ಕೆ ಬಳಸಿದ ರಿಕ್ಷಾವನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಬಂಧಿತನಾದ ಆರೋಪಿ ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ ವಿಚಾರಣೆಯ ವೇಳೆ ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ ಸ್ಫೋಟಕ ತಯಾರಿಸಿ ಗುಡ್ಡದಲ್ಲಿ ಇರಿಸುತ್ತಿದ್ದ. ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ ಸಹಕರಿಸುತ್ತಿದ್ದ. ವಿಜಯ ಜಾನ್ ತನ್ನ ರಿಕ್ಷಾದಲ್ಲಿ ಸ್ಫೋಟಕ ಹಾಗೂ ಆರೋಪಿಗಳನ್ನು ಕರೆದುಕೊಂಡು ಹೋಗುವುದು ಹಾಗೂ ಕರೆತರುವುದು ಮಾಡುತ್ತಿದ್ದ ಮಾಹಿತಿಯನ್ನು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಶೀನಪ್ಪ ನಾಯ್ಕ ಹಾಗೂ ವಿನೋದ್ ಶೆಟ್ಟಿ ತಲೆಮರೆಸಿಕೊಂಡಿದ್ದು, ವಿಚಾರಣೆಯ ಮಾಹಿತಿಗಳ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಮಾರ್ಗದರ್ಶನದಲ್ಲಿ ಪೊಲೀಸ್ ಸಹಾಯಕ ಉಪನಿರೀಕ್ಷಕ ಆನಂದ ಪೂಜಾರಿ, ಪ್ರವೀಣ್ ರೈ, ರಮೇಶ್, ಜಯಕುಮಾರ್, ರಕ್ಷಿತ್ ರೈ, ಬಾಲಕೃಷ್ಣ ಗೌಡ ಕಾರ್ಯಾಚರಣೆ ಮುಂದುವರಿಸಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.





