ನಗರಸಭೆಯ ನೋಟೀಸಿಗೆ ಹೈಕೋರ್ಟು ತಡೆಯಾಜ್ಞೆ : ಸ್ಥಗಿತಗೊಂಡಿದ್ದ ‘ತರಕಾರಿ ಬಜಾರ್' ಮತ್ತೆ ಆರಂಭ

ಪುತ್ತೂರು,ಅ.21 : ಪುತ್ತೂರು ನಗರಸಭಾ ಕಚೇರಿಯ ಬಳಿಯ ಮೀನಿನ ಮಾರುಕಟ್ಟೆ ಎದುರಿನ ರಾಧಿಕಾ ಪ್ಲಾಜಾ ಕಟ್ಟಡದಲ್ಲಿ ಆರಂಭಗೊಂಡಿದ್ದ ‘ತರಕಾರಿ ಬಜಾರ್’ ದಿನವಹಿ ತರಕಾರಿ ಮಾರಾಟ ಮಾರುಕಟ್ಟೆಗೆ ನಗರಸಭೆ ಪರವಾನಿಗೆ ನೀಡದೆ ,ತರಕಾರಿ ಬಜಾರ್‌ನ್ನು ಅಲ್ಲಿಂದ ತೆರೆವುಗೊಳಿಸಬೇಕೆಂದು ನಗರಸಭೆಯ ಆಯುಕ್ತರು ನೀಡಿದ್ದ ನೋಟೀಸಿಗೆ ರಾಜ್ಯ ಹೈಕೋರ್ಟು ತಡೆಯಾಜ್ಞೆ ನೀಡಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ತರಕಾರಿ ಬಜಾರ್ ಪುನರಾರಂಭಗೊಂಡಿದೆ. ಪುತ್ತೂರಿನ ಕಿಲ್ಲೆ ಮೈದಾನ ಮತ್ತು ಅದರ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರ ಆದೇಶದ ಮೇರೆಗೆ ತಿಂಗಳ ಹಿಂದೆ ನಗರದ ಹೊರವಲಯದಲ್ಲಿರುವ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸುವ ವೇಳೆ ಅದಕ್ಕೆ ಸಂತೆ ವ್ಯಾಪಾರಿಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಎಪಿಎಂಸಿ ಪ್ರಾಂಗಣಕ್ಕೆ ಹೋಗಲು ಸಿದ್ದರಿಲ್ಲದ ಕೆಲವು ವ್ಯಾಪಾರಿಗಳು ಸೇರಿಕೊಂಡು ನಗರಸಭೆ ಕಚೇರಿ ಬಳಿಯ ರಾಧಿಕಾ ಪ್ಲಾಜಾ ಖಾಸಗಿ ಕಟ್ಟಡದಲ್ಲಿನ ಎರಡು ಕೊಠಡಿಗಳನ್ನು ಪಡೆದುಕೊಂಡು ನಗರಸಭೆಯ ಸಂತೆ ಮಾರುಕಟ್ಟೆ ಶುಲ್ಕ ವಸೂಲಿ ಗುತ್ತಿಗೆದಾರರಾಗಿದ್ದ ಜಯರಾಮ ನಾಯ್ಕ ಅವರ ನೇತೃತ್ವದಲ್ಲಿ ದಿನವಹಿ ತರಕಾರಿ ಬಜಾರ್ ಆರಂಭಿಸಿದ್ದರು. ಪರವಾನಿಗೆ ಕೋರಿ ಜಯರಾಮ ನಾಯ್ಕ ಅವರು ನಗರಸಭೆಗೆ ಅರ್ಜಿ ಸಲ್ಲಿಸಿದ್ದರೂ ಪುರಸಭೆಯ ಆಯುಕ್ತರು ಅವರ ಅರ್ಜಿಯನ್ನು ತಿರಸ್ಕರಿಸಿ ಹಿಂಬರಹ ನೀಡಿದ್ದರು.
ನಗರಸಭೆಯ ಕಚೇರಿಯ ಬಳಿ ದಿನವಹಿ ಸಂತೆ ಮಾರುಕಟ್ಟೆ ಆರಂಭಿಸಿದ ಪರಿಣಾಮವಾಗಿ ಎಪಿಎಂಸಿಯಲ್ಲಿ ನಡೆಯುತ್ತಿರುವ ಸಂತೆ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣದ ಹಿನ್ನಲೆಯಲ್ಲಿ ನಗರಸಭಾ ಆಡಳಿತ ಅದರ ಮೇಲೆ ಕಣ್ಣಿರಿಸಿತ್ತು. ಒಂದೇ ಅಂಗಡಿ ಕೋಣೆಯಲ್ಲಿ ಏಳೆಂಟು ಮಂದಿ ಸೇರಿಕೊಂಡು ತರಕಾರಿ ವ್ಯಾಪಾರ ಮಾಡುವ ಮೂಲಕ ನಗರಸಭೆಯ ಪರವಾನಿಗೆ ಉಲ್ಲಂಘಿಸಲಾಗಿದೆ ಎಂಬ ಕಾರಣ ನೀಡಿ ತರಕಾರಿ ಬಜಾರ್ ಮಾಲಕ ಜಯರಾಮ ನಾಯ್ಕ ಅವರಿಗೆ ನಗರಸಭೆಯ ಆಯುಕ್ತರು ಕಳೆದ ಸೆ.21ರಂದು ನೋಟೀಸು ಜಾರಿಗೊಳಿಸಿದ್ದರು. 48 ಗಂಟೆಯೊಳಗಾಗಿ ವ್ಯಾಪಾರ ಸ್ಥಗಿತಗೊಳಿಸಬೇಕೆಂದು ನೋಟೀಸಿನಲ್ಲಿ ಸೂಚಿಸಲಾಗಿತ್ತು. ಆದರೂ ವ್ಯಾಪಾರ ಮುಂದುವರಿಸಲಾಗಿತ್ತು. ಈ ನಡುವೆ ನಗರಸಭೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಂಗಡಿಗೆ ಬೀಗ ಜಡಿಯಲು ಮುಂದಾಗಿದ್ದ ಸಂದರ್ಭದಲ್ಲಿ ಅಂಗಡಿ ಮಾಲಕರೇ ತರಕಾರಿ ಬಜಾರ್ ವ್ಯಾಪಾರ ಸ್ಥಗಿತಗೊಳಿಸಿ
ನಗರಸಭೆಯವರು ವ್ಯಾಪಾರ ಸ್ಥಗಿತಗೊಳಿಸುವಂತೆ ನೀಡಿದ್ದ ನೋಟೀಸು ವಿರುದ್ದ ಹೈಕೋರ್ಟು ಮೆಟ್ಟಲೇರಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟು ನಗರಸಭೆಯ ನೋಟೀಸಿಗೆ ತಡೆಯಾಜ್ಞೆ ನೀಡಿದೆ. ವಕೀಲ ಸಚಿನ್.ಬಿ.ಎಸ್. ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು. ಕಾನೂನು ಪ್ರಕಾರವೇ ತರಕಾರಿ ಅಂಗಡಿ ಉದ್ದಿಮೆ ಪರವಾನಿಗೆಗಾಗಿ ನಗರ ಸಭೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ ನಗರಸಭೆಯ ಅಧ್ಯಕ್ಷರ ಸೂಚನೆ ಮೇರೆಗೆ ಆಯುಕ್ತರು ತನಗೆ ಪರವಾನಿಗೆ ನೀಡದೆ ತನ್ನ ಉದ್ದಿಮೆ ಪರವಾನಿಗೆ ಅರ್ಜಿಯನ್ನು ತಿರಸ್ಕರಿಸಿದ್ದರು. ಇದೀಗ ಹೈಕೋರ್ಟಿನಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದು ಜಯರಾಮ ನಾಯ್ಕ ಅವರು ತಿಳಿಸಿದ್ದಾರೆ.
ತರಕಾರಿ ಜಬಾರ್ ಪುನರಾರಂಭ-ಸಮಾನ ಮನಸ್ಕರ ಬೆಂಬಲ
ಹೈಕೋರ್ಟು ನಗರಸಭೆಯ ನೋಟೀಸಿಗೆ ತಡೆಯಾಜ್ಞೆ ನೀಡಿರುವ ಹಿನ್ನಲೆಯಲ್ಲಿ ಜಯರಾಮ ನಾಯ್ಕ ಅವರ ನೇತೃತ್ವದಲ್ಲಿ ರಾಧಿಕಾ ಪ್ಲಾಜಾ ಕಟ್ಟಡದಲ್ಲಿ ಮತ್ತೆ ತರಕಾರಿ ಬಜಾರ್ ಶುಕ್ರವಾರ ಆರಂಭಗೊಂಡಿದೆ. ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಶುಕ್ರವಾರ ತರಕಾರಿ ಬಜಾರ್‌ನಲ್ಲಿ ವ್ಯಾಪಾರಕ್ಕೆ ಚಾಲನೆ ನೀಡಿದರು. ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ , ಸದಸ್ಯ ರಾಜೇಶ್ ಬನ್ನೂರು, ಕಾಂಗ್ರೆಸ್ ಮುಖಂಡರಾದ ವಕೀಲ ನಿರ್ಮಲ್ ಕುಮಾರ್ ಜೈನ್, ಜೆಡಿಎಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ, ಸಿಪಿಐಎಂ ಮುಖಂಡ ಪಿ.ಕೆ.ಸತೀಶನ್ ಅಲ್ಲದೆ ಸಂತೆ ಸ್ಥಳಾಂತರದ ವಿರುದ್ಧ ಧ್ವನಿ ಎತ್ತಿದ್ದ ವಿವಿಧ ರಾಜಕೀಯ ಪಕ್ಷಗಳ ಸಮಾನ ಮನಸ್ಕ ಮುಖಂಡರು ತರಕಾರಿ ಬಜಾರ್ ಪುನರಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಗರಸಭೆಗೆ ಹಿನ್ನಡೆ:
ರಾಧಿಕಾ ಪ್ಲಾಜಾದಲ್ಲಿ ನಡೆಯುತ್ತಿದ್ದ ತರಕಾರಿ ಜಬಾರ್ ದಿನವಹಿ ಸಂತೆ ವ್ಯಾಪಾರಕ್ಕೆ ನಗರಸಭೆ ಪರವಾನಿಗೆ ನೀಡದೆ, ಸ್ಥಗಿತಗೊಳಿಸಲು ನೋಟೀಸು ನೀಡಿದರೂ ಇದೀಗ ಕಾನೂನು ಸಮರದಲ್ಲಿ ಅಂಗಡಿ ಮಾಲಕರು ಮೇಲ್ಗೈ ಸಾಧಿಸುವ ಮೂಲಕ ಮತ್ತೆ ತರಕಾರಿ ಬಜಾರ್ ತೆರೆದಿರುವುದರಿಂದ ನಗರಸಭೆಗೆ ಈ ವಿಚಾರದಲ್ಲಿ ಹಿನ್ನಡೆಯಾಗಿದೆ.







