ಯುವಜನರಲ್ಲಿ ವಿವೇಚನೆ, ಅಭಿವೃದ್ಧಿಪರ ಯೋಚನೆ ಅಗತ್ಯ: ಪ್ರೊ.ಎಲ್.ಪ್ರೇಮಶೇಖರ್

ಕೊಣಾಜೆ,ಅ.21: ದೇಶದ ಅಭಿವೃದ್ದಿಯಲ್ಲಿ ಯುವಜನರ ಪಾತ್ರ ಮಹತ್ತರವಾದುದು. ಭಾರತದಲ್ಲಿರುವ ಯುವಶಕ್ತಿ ಕಠಿಣ ಪರಿಶ್ರಮ ಹಾಗೂ ಅಭಿವೃದ್ಧಿ ಪರ ಯೋಚನೆಗಳಿಂದ, ವಿವೇಚನೆಯಿಂದ ಮುನ್ನಡೆದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇಂದು ಚೀನಾ ನಮಗಿಂತ ಅಭಿವೃದ್ಧಿಯಲ್ಲಿ ಮುಂದಿದ್ದರೂ ಚೀನಾಕ್ಕೆ ಹೋಲಿಸಿದರೆ ಭಾರತ ಹೆಚ್ಚು ಯುವಜನತೆಯನ್ನು ಹೊಂದಿರುವ ರಾಷ್ಟ್ರ. ಚೀನಾ ದೇಶದಲ್ಲಿ ಮದ್ಯವಯಸ್ಸಿನವರೇ ಅತ್ಯಧಿಕ ಸಂಖ್ಯೆಯಲ್ಲಿ ತುಂಬಿದ್ದು ಇನ್ನು ನಿಧಾನವಾಗಿ ಚೀನಾ ದುರ್ಬಲವಾಗುತ್ತಾ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪಾಂಡಿಚೇರಿ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಎಲ್.ಪ್ರೇಮ್‌ಶೇಖರ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯ 2016-17ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್‌ನ ಉದ್ಘಾಟನೆಯನ್ನು ಶುಕ್ರವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನೆರವೇರಿಸಿ ಮಾತನಾಡಿದರು
ಕ್ರಾಂತಿಯಿಂದ ಆದ ಯಾವುದೇ ಬದಲಾವಣೆ ಅದು ದೀರ್ಘ ಕಾಲ ಉಳಿಯುವಂತಹದಲ್ಲ. ಆದರೆ ವಿಕಾಸದಿಂದ ಹಂತ ಹಂತವಾಗಿ ಆಗುವ ಬದಲಾವಣೆ ದೀರ್ಘವಾಗಿ ಶಾಶ್ವತವಾಗಿ ಉಳಿಯುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಅಥವಾ ಯುವಜನತೆ ತಮ್ಮ ಜೀವನದಲ್ಲಿ ಪರಿಶ್ರಮ, ಪ್ರಯತ್ನ ಹಾಗೂ ಸಂಯಮದೊಂದಿಗೆ ನೈಜತೆಯನ್ನು ಅರಿತುಕೊಂಡು ಉದ್ದೇಶಿತ ಗುರಿಯನ್ನು ಈಡೇರಿಸಿ ದೇಶದ ಸಂಪತ್ತು ಆಗಿ ಹೊರಹೊಮ್ಮಬೇಕು ಎಂದು ಅವರು ಹೇಳಿದರು.
ನಮ್ಮ ಜೀವನದಲ್ಲಿ 22 ರಿಂದ 30 ವಯಸ್ಸು ಬಹಳ ಮಹತ್ವಪೂರ್ಣವಾದುದು. ಈ ವಯಸ್ಸಿನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಭವಿಷ್ಯವನ್ನು ಕಟ್ಟುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇಂದು ಮಾಧ್ಯಮಗಳು ಸುದ್ದಿಗಳಿಗಿಂತ ಹೆಚ್ಚು ವಿಷಂಗಳ ವಿಮರ್ಶೆಗಳನ್ನು ಮಾತ್ರ ಮಾಡುತ್ತಿವೆ. ಆದ್ದರಿಂದ ನಾವು ಯಾವುದೇ ಘಟನೆ ಅಥವಾ ವಿಷಯವನ್ನು ನೇರವಾಗಿ ನೋಡುವುದರ ಬದಲು ಅದರ ನೈಜತೆಯನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ದೇಶದ 740 ವಿಶ್ವವಿದ್ಯಾಲಯಗಳ ಪೈಕಿ ಮಂಗಳೂರು ವಿವಿಯು ಸ್ಥಾಪನೆಯಾಗಿ 36 ವರ್ಷಗಳಾದರೂ 24ನೇ ಸ್ಥಾನದಲ್ಲಿದ್ದು ಹೆಮ್ಮೆಯ ವಿಚಾರವಾಗಿದೆ. ವಿವಿಯ ವಿದ್ಯಾರ್ಥಿಗಳ ವಿದ್ಯಾರ್ಜನೆ ಹಾಗೂ ಸಂಶೋಧನೆ ಸೇರಿದಂತೆ ಕೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದೆ. ವಿದ್ಯಾರ್ಥಿ ಜೀವನ ನಮ್ಮ ಬದುಕಿನ ಗೋಲ್ಡನ್ ಲೈಪ್ ಆಗಿದ್ದು ಮುಂದೆ ಬೇಕೆಂದರೂ ಅದು ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆಯೊಂದಿಗೆ ದೇಶದ ಸಂಪತ್ತು ಆಗಬೇಕು ಎಂದು ಹೇಳಿದರು.
ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಉದಯ ಬಾರ್ಕೂರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿವಾಕರ್ ಶೆಟ್ಟಿ ಅವರು ವಂದಿಸಿದರು.
ಪ್ರೊ.ಉದಯ ಬಾರ್ಕೂರು ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘಟನೆಯ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಶ್ಯಾಂ ಪ್ರಸಾದ್, ಕಾರ್ಯದರ್ಶಿ ಸುನೀಲ್, ಸಹಕಾರ್ಯದರ್ಶಿ ವೀರೇಂದ್ರ ಮೊಗವೀರ, ಸಾಂಸ್ಕೃತಿಕ ಕಾರ್ಯದರ್ಶಿ ಸುಕ್ಷಿತಾ ರಾವ್ ಬಿ, ಸಾಂಸ್ಕೃತಿಕ ಸಹಕಾರ್ಯದರ್ಶಿ ಅಶೋಕ್ ಆರ್. ಉಪಸ್ಥಿತರಿದ್ದರು.







