ಸಿಬಿಎಸ್‌ಇ 10ನೆ ತರಗತಿಯ ಮಂಡಳಿ ಪರೀಕ್ಷೆ ಪುನರಾರಂಭ ಸಾಧ್ಯತೆ

ಹೊಸದಿಲ್ಲಿ, ಅ.21: ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಕಡಿಮೆ ಮಾಡಲು 6 ವರ್ಷಗಳ ಹಿಂದೆ ರದ್ದುಪಡಿಸಲಾಗಿದ್ದ ಸಿಬಿಎಸ್‌ಇಯ 10ನೆ ತರಗತಿಯ ಮಂಡಳಿ ಪರೀಕ್ಷೆಯನ್ನು ಪುನರಾರಂಭಿಸುವ ನಿರೀಕ್ಷೆಯಿದೆ. ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮವಾಗುತ್ತಿದೆಯೆಂಬ ಕಳವಳ ಪರೀಕ್ಷೆ ಪುನರಾರಂಭಕ್ಕೆ ಕಾರಣವೆನ್ನಲಾಗಿದೆ.
ಮಾನ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ರ ಅಧ್ಯಕ್ಷತೆಯಲ್ಲಿ ಅ.25ರಂದು ನಡೆಯುವ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿತ (ಸಿಎಬಿಇ) ಸಭೆಯೊಂದರಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಪರೀಕ್ಷೆಯನ್ನು ರದ್ದುಗೊಳಿಸಿದುದರಿಂದ ಹಾಗೂ ಅನುತ್ತೀರ್ಣತೆಯಿಲ್ಲವೆಂಬ ನೀತಿಯಿಂದ ಶೈಕ್ಷಣಿಕ ಗುಣಮಟ್ಟ ಬಾಧಿಸಲ್ಪಡುತ್ತಿದೆಯೆಂದು ಶಿಕ್ಷಣ ತಜ್ಞರು ಹಾಗೂ ಹೆತ್ತವರ ಸಂಘಟನೆಗಳು ದೂರು ನೀಡಿವೆ. ಅಲ್ಲದೆ, ಮುಂದಿನ ಶಿಕ್ಷಣವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿರುವ 12ನೆ ತರಗತಿಯ ಪರೀಕ್ಷೆಗೆ ನೇರವಾಗಿ ಕುಳಿತುಕೊಳ್ಳುವ ಒತ್ತಡ ವಿದ್ಯಾರ್ಥಿಗಳ ಮೇಲೆ ಉಂಟಾಗುವುದು ಗಮನಕ್ಕೆ ಬಂದಿದೆಯೆಂದು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಪರೀಕ್ಷೆಯನ್ನು ಯಾವಾಗ ಮರು ಆರಂಭಿಸುವುದೆಂಬ ಕುರಿತು ಏಕಾಭಿಪ್ರಾಯ ಮೂಡಿಲ್ಲ. 2018ಕ್ಕೆ ಅದು ಸಾಧ್ಯವಾಗಬಹುದೆಂದು ಅಭಿಪ್ರಾಯಿಸಲಾಗಿದೆಯೆಂದು ಅವರು ಹೇಳಿದ್ದಾರೆ.
2010ರಲ್ಲಿ ಸಿಬಿಎಸ್‌ಇಯ 10ನೆ ತರಗತಿಯ ಮಂಡಳಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.







