ಯಕ್ಷಗಾನ ಭಾಗವತ ಐರೋಡಿ ರಾಮ ಗಾಣಿಗ

ಉಡುಪಿ, ಅ.21: ರಾಜ್ಯೋತ್ಸವ ಪುರಸ್ಕೃತ ಯಕ್ಷಗಾನ ಭಾಗವತ ಹಾಗೂ ಶಿಕ್ಷಕ ರಾಷ್ಟ್ರಪ್ರಶಸ್ತಿ ವಿಜೇತ ಐರೋಡಿ ರಾಮ ಗಾಣಿಗ ಅವರು ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 97 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸಾಸ್ತಾನದ ಐರೋಡಿಯಲ್ಲಿ 1919ರಲ್ಲಿ ಪುಟ್ಟಯ್ಯ ಗಾಣಿಗರ ಪುತ್ರರಾಗಿ ಜನಿಸಿದ ರಾಮ ಗಾಣಿಗರು, 14ನೇ ವಯಸ್ಸಿನಲ್ಲೇ ಆಗಿನ ಪ್ರಸಿದ್ಧ ಭಾಗವತರಾದ ಶ್ರೀನಿವಾಸ ಉಪ್ಪೂರರನ್ನು ಗುರುವಾಗಿ ಸ್ವೀಕರಿಸಿ ಭಾಗವತಿಕೆಯನ್ನು ಅಭ್ಯಸಿಸಿದರು. ಕೋಟ ಅಮೃತೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಸೌಕೂರು, ಮಂದಾರ್ತಿ, ಮಾರಣಕಟ್ಟೆ ಮೇಳಗಳಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸಿದ್ದರು.
ಅಧ್ಯಾಪಕ ವೃತ್ತಿಯೊಂದಿಗೆ ಯಕ್ಷಗಾನ ಕಲಾಸೇವೆ ಮಾಡಿದ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಕೋಟ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲೂ ಸುಮಾರು 15 ವರ್ಷ ಭಾಗವತರಾಗಿ ದುಡಿದು ದೇಶ-ವಿದೇಶ ಪ್ರವಾಸ ಕೈಗೊಂಡಿದ್ದರು.
ಮುಂದೆ ಅವರು ಉಪ್ಪಿನಕುದ್ರು ಕೊಗ್ಗ ಕಾಮತರ ಯಕ್ಷಗಾನ ಗೊಂಬೆಯಾಟ ತಂಡದಲ್ಲೂ ಭಾಗವತರಾಗಿ ದುಡಿದಿದ್ದರು. ಅಲ್ಲದೇ ಕೇಂದ್ರ ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ನಡೆದ ಹಿಂದಿ ಯಕ್ಷಗಾನ ಪ್ರದರ್ಶನದಲ್ಲೂ ಭಾಗವತರಾಗಿ ಕಾರ್ಯನಿರ್ವಹಿಸಿದ್ದರು.
ಕೇವಲ ಭಾಗವತಿಕೆಗೆ ತನ್ನನ್ನು ಸೀಮಿತಗೊಳಿಸದೇ ಅವರು ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು. ಘೋರ ಭೀಷಣ ಕಾಳಗ, ವಿಶ್ವರೂಪ ದರ್ಶನ, ಕುಂಭಾಶಿ ಕ್ಷೇತ್ರ ಮಹಾತ್ಮೆ ಅವರು ರಚಿಸಿದ ಕೆಲವು ಪ್ರಸಂಗಗಳಾಗಿವೆ. ಒಳ್ಳೆಯ ಶಿಕ್ಷಕರಾಗಿ ಜನಪ್ರಿಯತೆಯನ್ನು ಪಡೆದಿದ್ದ ಅವರು ಪ್ರಶಸ್ತಿಯನ್ನೂ ಪಡೆದಿದ್ದರು.
ನಿವೃತ್ತಿಯ ಬಳಿಕ ಕುಂಭಾಶಿಯಲ್ಲಿ ನೆಲೆಸಿದ್ದ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತಿದ್ದರು. ಕೆಲವು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐರೋಡಿ ರಾಮಗಾಣಿಗರ ಎಸರಿನಲ್ಲಿ ಯಕ್ಷಗಾನ ಕಲಾರಂಗ ಪ್ರತಿ ವರ್ಷ ಯಕ್ಷ ಕಲಾವಿದರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ರಾಮ ಗಾಣಿಗರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಅವರು ಎರಡು ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅಂಬಲಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಳಡಳಿ ತೀವ್ರ ಸಂತಾಪ ಸೂಚಿಸಿದೆ.







