ಪ್ರಾಂಶುಪಾಲರ ಬಂಧನಕ್ಕೆ ಆದೇಶ
ದಲಿತ ಯುವಕನಿಗೆ ಥಳಿತ ಪ್ರಕರಣ
ಮುಝಫ್ಫರ್‌ಪುರ, ಅ.21: ಮುಝಫ್ಫರ್‌ಪುರ ಕೇಂದ್ರೀಯ ವಿದ್ಯಾಲಯದ ದಲಿತ ವಿದ್ಯಾರ್ಥಿಯೋರ್ವನ ಮೇಲೆ ಆತನ ಸಹಪಾಠಿಗಳು ಹಲ್ಲೆ ನಡೆಸಿದ ದೃಶ್ಯಗಳು ಸಾಮಾ ಜಿಕ ಜಾಲ ತಾಣದಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾಲಯದ ಪ್ರಾಂಶುಪಾಲ ರಾಜೀವ್ ರಂಜನ್ ಅವರ ಬಂಧನಕ್ಕೆ ಪೊಲೀಸರು ಆದೇಶಿಸಿದ್ದಾರೆ.
ರಂಜನ್ ಪ್ರಕರಣವನ್ನು ಮುಚ್ಚಿಹಾಕುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ನೀಡಿದ ವರದಿಯಂತೆ ಪೊಲೀಸರು ಅವರನ್ನು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧನಕ್ಕೆ ಆದೇಶಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಯ ದೂರಿನ ಬಗ್ಗೆ ಸೂಕ್ತವಾಗಿ ಸ್ಪಂದಿಸದ ಕಾರಣಕ್ಕೆ ಪ್ರಾಂಶುಪಾಲರನ್ನು ಕೆ.ವಿ.ಸಂಘಟನೆಯು ಅ.19ರಂದು ಅಮಾನತು ಮಾಡಿತ್ತು. ಅಲ್ಲದೆ ಶಾಲೆಯಲ್ಲಿರುವ 120 ಶಿಕ್ಷಕರಲ್ಲಿ 20 ಶಿಕ್ಷಕರನ್ನೂ ವರ್ಗಾವಣೆ ಮಾಡಲಾಗಿದೆ.
ಇದನ್ನು ವಿರೋಧಿಸಿ ವಿದ್ಯಾರ್ಥಿಗಳ ಒಂದು ವರ್ಗ ಪ್ರತಿಭಟನೆಯಲ್ಲಿ ತೊಡಗಿದೆ. ಅರ್ಧ ವಾರ್ಷಿಕ ಪರೀಕ್ಷೆ ಎದುರಿರುವ ಕಾರಣ ಈಗ ಶಿಕ್ಷಕರನ್ನು ವರ್ಗಾವಣೆ ಮಾಡಿದಲ್ಲಿ ತೊಂದರೆಯಾಗುತ್ತದೆ. ಅಲ್ಲದೆ ಪ್ರಾಂಶುಪಾಲರು ಪ್ರಕರಣದಲ್ಲಿ ಅಮಾಯಕರಾಗಿದ್ದು ಅವರನ್ನು ಬಲಿಪಶು ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಪ್ರಾಂಶುಪಾಲರು 10 ಮಂದಿಯ ಸಮಿತಿ ರಚಿಸಿದ್ದು ಸಮಿತಿಯು ಇಬ್ಬರು ಆರೋಪಿಗಳನ್ನು 10 ದಿನ ಅಮಾನತುಗೊಳಿಸುವಂತೆ ಸೂಚಿಸಿತ್ತು. ಕೆ.ವಿ.ಸಂಘಟನೆಯ ಪಾಟ್ನಾ ವಲಯದ ಸಹಾಯಕ ಕಮಿಷನರ್ ಮಣಿಲಾಲ್ ಮಿಶ್ರಾ ಅವರ ನೇತೃತ್ವದಲ್ಲಿ ಮೂವರು ಸದಸ್ಯರನ್ನೊಳಗೊಂಡ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ತನ್ನ ಮಗನನ್ನು ಥಳಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರ ವಿರುದ್ಧ ಸಂತ್ರಸ್ತ ವಿದ್ಯಾರ್ಥಿಯ ತಾತ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಕೆಲ ಶಿಕ್ಷಕರು ಮತ್ತು ಶಿಸ್ತುಕ್ರಮ ಸಮಿತಿಯ ಸದಸ್ಯರ ಪಾತ್ರ ಇದೆಯೇ ಎಂದು ತನಿಖೆ ನಡೆಸಲು ಎಸ್‌ಪಿ ಕುಮಾರ್ ತನಿಕಾಧಿಖಾರಿಗೆ ಸೂಚಿಸಿದ್ದಾರೆ.
ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲು: ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿಯ ಸಹಪಾಠಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಲಾಗಿದ್ದು ಇವರನ್ನು 14 ದಿನ ರಿಮಾಂಡ್ ಹೋಂನಲ್ಲಿ ಇಡಲು ಸೂಚಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಇತರ ನಾಲ್ವರು ವಿದ್ಯಾರ್ಥಿಗಳನ್ನು ಬಾಲಾಪರಾಧಿ ನ್ಯಾಯ ಮಂಡಳಿಯೆದುರು ಪ್ರಸ್ತುತಪಡಿಸುವ ನಿರೀಕ್ಷೆಯಿದೆ.





