‘ತ್ರಿವಳಿ ತಲಾಖ್’ ಧಾರ್ಮಿಕ ಚೌಕಟ್ಟಿನಲ್ಲಿ ಇತ್ಯರ್ಥವಾಗಬೇಕುಸಚಿವ ಯು.ಟಿ.ಖಾದರ್

ಬೆಂಗಳೂರು, ಅ.21: ಧಾರ್ಮಿಕವಾದ ವೈಯಕ್ತಿಕ ವಿಷಯಗಳು ಧರ್ಮದ ಚೌಕಟ್ಟಿನಲ್ಲಿ ಇತ್ಯರ್ಥವಾಗಬೇಕು. ಆದರೆ, ಇತ್ತೀಚೆಗೆ ಮುಸ್ಲಿಮರಲ್ಲಿರುವ ‘ತ್ರಿವಳಿ ತಲಾಖ್’ ವಿಚಾರವು ಹೆಚ್ಚು ಚರ್ಚೆಗೊಳಪಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್ ಕುರಿತು ಪರಿಜ್ಞಾನವಿಲ್ಲದವರೇ ಆ ವಿಚಾರವನ್ನು ಹೆಚ್ಚು ಚರ್ಚಿಸುತ್ತಿರುವುದು ಹಾಸ್ಯಾಸ್ಪದ. ಧಾರ್ಮಿಕ ಹಾಗೂ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಈ ವಿಷಯದ ಕುರಿತು ಉಲೆಮಾಗಳು, ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಬಗೆಹರಿಸುತ್ತಾರೆ ಎಂದರು.
ನ್ಯಾಯಾಲಯಗಳಲ್ಲಿ ಈ ಧಾರ್ಮಿಕವಾದ ಸೂಕ್ಷ್ಮ ವಿಚಾರಗಳು ಬಗೆಹರಿಯುವುದಿಲ್ಲ. ಅದೇ ರೀತಿ ಬಹುಪತ್ನಿತ್ವದ ಕುರಿತು ಚರ್ಚೆಗಳು ನಡೆಸಲಾಗುತ್ತಿದೆ. ಇಸ್ಲಾಮ್‌ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ. ಆದರೆ, ಯಾವೊಬ್ಬ ವ್ಯಕ್ತಿಯೂ ಏಕಾಏಕಿ ಒಂದಕ್ಕಿಂತ ಹೆಚ್ಚು ವಿವಾಹವಾಗಲು ಅವಕಾಶವಿಲ್ಲ. ಅದಕ್ಕಾಗಿ ಹಲವಾರು ನೀತಿ, ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಅವರು ಹೇಳಿದರು.





