ನಟ ದರ್ಶನ್ ಮನೆ ಸರಕಾರಿ ವಶಕ್ಕೆ ..!

ಬೆಂಗಳೂರು, ಅ. 22: ರಾಜಕಾಲುವೆಯನ್ನು ಆಕ್ರಮಿಸಿ ಕಟ್ಟಿರುವ ಕನ್ನಡದ ನಟ ದರ್ಶನ್ ಅವರ ಮನೆಯನ್ನು ಇಂದು ಜಿಲ್ಲಾಡಳಿತ ಸಾಂಕೇತಿಕವಾಗಿ ವಶಕ್ಕೆ ತೆಗೆದುಕೊಂಡಿದೆ.
ರಾಜರಾಜೇಶ್ವರ ನಗರದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಿರುವ ದರ್ಶನ್ ಅವರ ಮನೆ ಐಡಿಯಲ್ ಹೋಮ್‌ನ್ನು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶಿವಕುಮಾರ‍್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ.
ಐಡಿಯಲ್ ಹೋಮ್ ಗೋಡೆಯ ಮೇಲೆ ’ಸರಕಾರಿ ಸೊತ್ತು ’ ಎಂದು ಬರೆಯಲಾಗಿದೆ.
ಮರು ಸರ್ವೆ ವೇಳೆ ದರ್ಶನ್ ಅವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿರುವುದು ಪತ್ತೆಯಾಗಿತ್ತು. : ಐಡಿಯಲ್ ಹೋಮ್ ಪಕ್ಕದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಿರುವ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಮಾಲಕತ್ವದ ಎಸ್ ಎಸ್ ಆಸ್ಪತ್ರೆಯನ್ನು ವಶಕ್ಕೆ ಪಡೆಯುವ ಜಿಲ್ಲಾಡಳಿತದ ಕ್ರಮಕ್ಕೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಆಸ್ಪತ್ರೆಯ ಸಂಪೂರ್ಣ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಸಲ್ಲಿಸುವಂತೆ ಇದೇ ವೇಳೆ ಹೈಕೋರ್ಟ್ ಸೂಚಿಸಿದೆ ದಾಖಲೆ ಪರಿಶೀಲಿಸಿದ ಬಳಿಕ ಪ್ರಾಧಿಕಾರ ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಆಸ್ಪತ್ರೆಯ ಮಾಲಕರು ರಾಜ್ಯ ಹೈಕೋರ್ಟ್‌ನ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು, ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಸಲ್ಲಿಸುವಂತೆ ಆದೇಶ ನೀಡಿದ್ದರು..





