ರಾಜ್ ಠಾಕ್ರೆ ನಿಗದಿಪಡಿಸಿದ ಸಿನಿಮಾ ನಿರ್ಮಾಪಕರ ಪ್ರಾಯಶ್ಚಿತ್ತ ಬೆಲೆ ಎಷ್ಟು?
.jpg)
ಮುಂಬೈ,ಅ.22: ಪಾಕಿಸ್ತಾನಿ ಕಲಾವಿದರನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಂಡಿರುವ ಚಿತ್ರ ನಿರ್ಮಾಪಕರು ‘ಪ್ರಾಯಶ್ಚಿತ್ತ ದಂಡ’ವಾಗಿ ಸೇನೆಯ ಕಲ್ಯಾಣ ನಿಧಿಗೆ ಐದು ಕೋ.ರೂ.ಗಳನ್ನು ನೀಡಬೇಕಾಗುತ್ತದೆ ಎಂದು ಇಂದಿಲ್ಲಿ ತಿಳಿಸಿದ ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆ ಅವರು, ಭವಿಷ್ಯದಲ್ಲಿ ಪಾಕಿಸ್ತಾನಿ ಕಲಾವಿದರನ್ನು ಬಳಸುವುದಿಲ್ಲ ಎಂದು ನಿರ್ಮಾಪಕರು ತನಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕರಣ್ ಜೋಹರ್ ಅವರ ‘ಎ ದಿಲ್ ಹೈ ಮುಷ್ಕಿಲ್ ’ಚಿತ್ರದ ಬಿಡುಗಡೆಗೆ ತಾನು ತಡೆಯೊಡ್ಡುವುದಿಲ್ಲವೆಂದು ಹೇಳಿದರು.
ಜೋಹರ್ ಮತ್ತು ಚಿತ್ರ ನಿರ್ಮಾಪಕರ ಗಿಲ್ಡ್‌ನ ಅಧ್ಯಕ್ಷ ಮುಕೇಶ್ ಭಟ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಪಾಕ್ ನಟ ಫವಾದ್ ಖಾನ್ ಅಭಿನಯಿಸಿರುವ ‘ಎ ದಿಲ್..’ಚಿತ್ರದ ಪ್ರದರ್ಶನವನ್ನು ತಡೆಯುವುದಾಗಿ ಎಂಎನ್‌ಎಸ್ ಸೇರಿದಂತೆ ಹಲವಾರು ಸಂಘಟನೆಗಳು ಬೆದರಿಕೆಯನ್ನೊಡಿದ್ದವು. ನಾವು ರಚನಾತ್ಮಕ ಮಾತುಕತೆಗಳನ್ನು ನಡೆಸಿದೆವು. ಚಿತ್ರರಂಗದ ಭಾವನೆಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಮಟ್ಟಿಗೆ ಭಾರತವು ಮೊದಲು... ಭವಿಷ್ಯದಲ್ಲಿ ಪಾಕ್ ಕಲಾವಿದರೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲವೆಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದೇವೆ ಎಂದು ಭಟ್ ತಿಳಿಸಿದರು.
ತಮ್ಮ ಚಿತ್ರಗಳಲ್ಲಿ ಪಾಕ್ ಕಲಾವಿದರನ್ನು ಬಳಸಿಕೊಂಡಿರುವ ಎಲ್ಲ ನಿರ್ಮಾಪಕರು ಪ್ರಾಯಶ್ಚಿತ್ತ ದಂಡವಾಗಿ ಸೇನೆಯ ಕಲ್ಯಾಣ ನಿಧಿಗೆ ಸ್ವಲ್ಪ ಹಣವನ್ನು ಪಾವತಿಸಬೇಕು. ಚಿತ್ರವೊಂದಕ್ಕೆ ಐದು ಕೋ.ರೂ.ನೀಡುವಂತೆ ತಾನು ಸೂಚಿಸಿದ್ದೇನೆ ಎಂದು ಠಾಕ್ರೆ ತಿಳಿಸಿದರು.
ಶಾರುಕ್ ಖಾನ್ ಅವರ ಮುಂಬರುವ ‘ರಯೀಸ್ ’ ಮತ್ತು ‘ಡಿಯರ್ ಜಿಂದಗಿ’ ಚಿತ್ರಗಳಿಗೂ ಈ ಷರತ್ತು ಅನ್ವಯಿಸುತ್ತದೆ.
ಚಿತ್ರ ಆರಂಭಗೊಳ್ಳುವುದಕ್ಕೆ ಮುನ್ನ ಸಂದೇಶವೊಂದನ್ನು ತೋರಿಸುವ ಮೂಲಕ ಪಾಕಿಸ್ತಾನಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಯೋಧರಿಗೆ ಗೌರವ ಸಲ್ಲಿಸುವ ಕೊಡುಗೆಯನ್ನು ಜೋಹರ್ ಮುಂದಿಟ್ಟಿದ್ದಾರೆ ಎಂದು ಭಟ್ ತಿಳಿಸಿದರು.







