ಶಕ್ತಿ ಕೇಂದ್ರದಲ್ಲಿ ಸಿಕ್ಕ ಹಣ ನ್ಯಾಯಾಲಯದ ವಶಕ್ಕೆ

ಬೆಂಗಳೂರು, ಅ. 22: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಆವರಣದಲ್ಲಿ ವಕೀಲ ಎಚ್.ಎಂ.ಸಿದ್ಧಾರ್ಥ ಎಂಬವರ ಕಾರಿನಲ್ಲಿ ಪತ್ತೆಯಾದ ಸೂಕ್ತ ದಾಖಲೆಗಳಿಲ್ಲದ 1.97 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಗದನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ನಿನ್ನೆ ಮಧ್ಯಾಹ್ನ 1:30ರಿಂದ 2 ಗಂಟೆ ಮಧ್ಯೆದ ಅವಧಿಯಲ್ಲಿ ಇಲ್ಲಿನ ವಿಧಾನಸೌಧದ ಪಶ್ಚಿಮ ದ್ವಾರ(ಕೆಂಗಲ್ ಹನುಮಂತಯ್ಯ ಗೇಟ್)ದಲ್ಲಿ ವೋಕ್ಸ್‌ವ್ಯಾಗನ್ ಕಾರಿನ ತಪಾಸಣೆ ವೇಳೆ ಹಣ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡಿದ್ದ ವಿಧಾನಸೌಧ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತ್ತು, ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬ ಬಗ್ಗೆ ವಕೀಲ ಸಿದ್ಧಾರ್ಥ ಸೂಕ್ತ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಸಿದ್ಧಾರ್ಥ ಅವರಿಗೆ ಸೂಕ್ತ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕಾರಿನಲ್ಲಿ ದೊರೆತ ಹಣದ ಬಗ್ಗೆ ಸೂಕ್ತ ದಾಖಲೆ ಮತ್ತು ಯಾವ ಕಾರಣಕ್ಕಾಗಿ ಕೊಂಡೊಯ್ಯಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಅಗತ್ಯ ದಾಖಲೆ ನೀಡಿ ಹಣವನ್ನು ನ್ಯಾಯಾಲಯದಿಂದ ಪಡೆದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ವ್ಯಾಪಕ ಸಂಶಯ: ವಿಧಾನಸೌಧದಲ್ಲಿ ಬೃಹತ್ ಮೊತ್ತದ ದಾಖಲೆಗಳಿದ್ದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ವ್ಯಾಪಕ ಸಂಶಯ ಸೃಷ್ಟಿಯಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣವನ್ನು ಕೈಬಿಡುವ ಸಂಬಂಧ ಪ್ರಭಾವಿ ರಾಜಕೀಯ ಮುಖಂಡರೊಬ್ಬರ ಪರ ನ್ಯಾಯಾಧೀಶರಿಗೆ ನೀಡಲು ಹಣ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗುತ್ತಿದೆ.
ಈ ಸಂಬಂಧ ವಿಧಾನಸೌಧ ಹಾಗೂ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಹಣದ ಮೂಲದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.







