ಭಾರತದೊಂದಿಗಿನ ಸಂಬಂಧ ಬಲಿಷ್ಠ: ಅಮೆರಿಕ

ವಾಶಿಂಗ್ಟನ್, ಅ. 23: ಭಾರತದೊಂದಿಗಿನ ಅಮೆರಿಕದ ಸಂಬಂಧ ಬಲಿಷ್ಠವಾಗಿದೆ ಹಾಗೂ ಬಹು ಆಯಾಮಗಳನ್ನು ಹೊಂದಿದೆ ಎಂದು ಅಮೆರಿಕ ಇಂದು ಹೇಳಿದೆ.
ಅದೇ ವೇಳೆ, ಇತ್ತೀಚೆಗೆ ಭಾರತದಲ್ಲಿ ನಡೆದ ‘ಬ್ರಿಕ್ಸ್’ ಸಮ್ಮೇಳನವನ್ನು ಅದು ಶ್ಲಾಘಿಸಿದೆ.
‘‘ಭಾರತದೊಂದಿಗೆ ಒಬಾಮ ಆಡಳಿತ ಹೊಂದಿರುವ ದ್ವಿಪಕ್ಷೀಯ ಸಂಬಂಧ ಅತ್ಯುತ್ತಮವಾಗಿದೆ’’ ಎಂದು ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಹೇಳಿದರು.
‘‘ನಾವು ಕಿಗಾಲಿಯಲ್ಲಿ ಭಾರತದೊಂದಿಗೆ ಅತ್ಯುತ್ತಮ ಮಾತುಕತೆಗಳನ್ನು ನಡೆಸಿದೆವು. ಅಲ್ಲಿನ ಮಾತುಕತೆಗಳಲ್ಲಿ ಭಾರತದ ಸಕ್ರಿಯ ಪಾಲ್ಗೊಳ್ಳುವಿಕೆ ಉತ್ತಮ ಬೆಳವಣಿಗೆಯಾಗಿದೆ’’ ಎಂದು ಕಿರ್ಬಿ ನುಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗೋವಾದಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್ ಸಮ್ಮೇಳನವನ್ನು ಸ್ವಾಗತಿಸಿದರು.
‘‘ಪರಿಣಾಮಕಾರಿ ಭಯೋತ್ಪಾದನೆ ನಿಗ್ರಹ ವಿಧಿವಿಧಾನಗಳು, ಪ್ರಕ್ರಿಯೆಗಳು, ತಂತ್ರಗಾರಿಕೆಗಳು, ನೀತಿಗಳು ಹಾಗೂ ಸಂಪನ್ಮೂಲಗಳ ಬಳಕೆಯ ಬಗ್ಗೆ ನಡೆದ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆಗಳನ್ನು ನಾವು ಸ್ವಾಗತಿಸುತ್ತೇವೆ’’ ಎಂದರು.





