ಆದೇಶದ ಉಲ್ಲಂಘನೆ ಇಲ್ಲ; ಒಳಾಂಗಣದಲ್ಲಿ ಕಾರ್ಯಕ್ರಮ: ಪೇಜಾವರ ಶ್ರೀ

ಉಡುಪಿ, ಅ.22: ಶ್ರೀಕೃಷ್ಣ ಮಠದ ಅಂಗಣವೆಂದೇ ಹೇಳಬಹುದಾದ ರಾಜಾಂಗಣ ಸೇರಿದಂತೆ ಮಠದ ಪರಿಸರದಲ್ಲಿ ನಾಳಿನ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವುದರಿಂದ ನಮಗೆ ತುಂಬಾ ಬೇಸರವಾಗಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಯುವ ಬ್ರಿಗೇಡ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ನಾಳೆ ನಡೆಸಲು ಉದ್ದೇಶಿಸಿದ್ದ ‘ಕನಕ ನಡೆ’ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊನೆಯ ಗಳಿಗೆಯಲ್ಲಿ ಅನುಮತಿ ನಿರಾಕರಿಸಿರುವುದಕ್ಕೆ ಬೇಸರವಾಗಿದೆ ಎಂದರು.
ಜಿಲ್ಲಾಡಳಿತದ ಆದೇಶವನ್ನು ಮೀರದೇ ನಾಳೆ ಕೃಷ್ಣಮಠಕ್ಕೆ ಸೇರಿದ ಜಾಗದಲ್ಲಿ- ರಾಜಾಂಗಣದ ಹಿಂಭಾಗದ ಪಾರ್ಕಿಂಗ್ ಪ್ರದೇಶ, ಮಠದ ಒಳಾಂಗಣ, ರಾಜಾಂಗಣ- ಕಾರ್ಯಕ್ರಮ ನಡೆಯಲಿದೆ. ಸಂಜೆ ರಾಜಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತಾನು ಭಾಗವಹಿಸುವುದಾಗಿ ತಿಳಿಸಿದರು. ಅಷ್ಟಮಠಗಳ ಅಂಗಣವೆಂದೇ ಹೇಳಬಹುದಾದ ರಥಬೀದಿಯ ಸ್ವಚ್ಛತೆಗೂ ಅನುಮತಿ ನಿರಾಕರಿಸಿರುವುದು ಅತೀವ ನೋವು ತಂದಿದೆ. ಸರಕಾರ ಯಾಕೆ ಅಷ್ಟೊಂದು ಕಠಿಣವಾಗಿ ವರ್ತಿಸಿದೆ ಗೊತ್ತಿಲ್ಲ ಎಂದರು.
ಬೆಂಬಲಕ್ಕೆ ಕೃತಜ್ಞತೆ
ಉಡುಪಿ ಚಲೋ ಜಾಥವು ಅನಾವಶ್ಯಕವಾಗಿ ಕೃಷ್ಣಮಠವನ್ನು ಎಳೆದು ಮುತ್ತಿಗೆ ಘೋಷಣೆ ಮಾಡಿದಾಗ ನಾಡಿನ ಸಮಸ್ತ ಜನತೆ ನಮ್ಮ ಬೆಂಬಲಕ್ಕೆ ನಿಂತಿರುವುದಕ್ಕೆ ತಮಗೆ ಅತ್ಯಂತ ಸಂತೋಷವಾಗಿದೆ. ಉಡುಪಿ ಅಷ್ಟಮಠಾಧೀಶರು ಎಲ್ಲಾ ಸಂದರ್ಭಗಳಲ್ಲೂ ನಮ್ಮ ಜೊತೆಗೆ ಇರುವ ಭರವಸೆ ನೀಡಿದ್ದಾರೆ.
ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ, ಸ್ವರ್ಣವಲ್ಲಿ ಮಠಾಧೀಶರು, ರಾಘವೇಶ್ವರ ಭಾರತಿ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಕರಾವಳಿಯ ಎಲ್ಲಾ ಮಠಾಧೀಶರು, ಸಂಘ ಪರಿವಾರ, ದಲಿತ ಸಮಾಜ, ಬ್ರಾಹ್ಮಣ ಸಮಾಜ, ಮೊಗವೀರ, ಬಿಲ್ಲವ, ದೇವಾಡಿಗ ಸಮಾಜ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳೂ, ನಾಡಿನ ಪ್ರಮುಖ ವ್ಯಕ್ತಿಗಳೂ, ರಾಜಕಾರಣಿಗಳೂ ನಮ್ಮ ಜೊತೆಗಿರುವುದಾಗಿ ಹೇಳಿದ್ದಾರೆ. ಇವರೆಲ್ಲರಿಗೂ ತಾವು ಮಠದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತಂದಿಲ್ಲ
ಮಠದಿಂದ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ಬರುವ ಯಾವುದೇ ಘಟನೆಯೂ ನಡೆದಿಲ್ಲ. ನಾನು ದಲಿತರ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿದ ಪ್ರಪ್ರಥಮ ಪೀಠಾಧಿಪತಿಯಾಗಿರುವುದನ್ನು ಹೆಮ್ಮೆ ಹಾಗೂ ವಿನಮ್ರತೆಯಿಂದ ಹೇಳುತ್ತೇನೆ ಎಂದರು.
ಕೃಷ್ಣ ಮಠದಲ್ಲಿ ಪ್ರತಿದಿನ ಸಹಸ್ರಾರು ಮಂದಿಗೆ ಯಾವುದೇ ಜಾತಿಬೇಧವಿಲ್ಲದೇ ಸಹಪಂಕ್ತಿ ಭೋಜನ ನಡೆಯುತ್ತಿದೆ. ಯಾವುದೇ ಸಮುದಾಯಕ್ಕೂ, ಧರ್ಮದ ಜನತೆಯ ಸ್ವಾಭಿಮಾನಕ್ಕೂ ಭಂಗ ಬಾರದಂತೆ ಅವರವರ ಸಮುದಾಯದ ಧಾರ್ಮಿಕ ನಿಯಮಗಳಿಗೆ ತೊಂದರೆಯಾಗದಂತೆ ಕೃಷ್ಣ ಮಠದಲ್ಲಿ ಭೋಜನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮ್ಮನೆ ನಮ್ಮ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಪ್ರತ್ಯೇಕವಾಗಿ ನನ್ನೊಂದಿಗೆ ಚರ್ಚಿಸಲು ಎಲ್ಲರಿಗೂ ಅವಕಾಶವಿದೆ ಎಂದು ಪೇಜಾವರ ಶ್ರೀಗಳು ನುಡಿದರು.
ಗೋರಕ್ಷಣೆ ಹಾಗೂ ಗೋಹತ್ಯಾ ನಿರೋಧಕ್ಕೆ ನನ್ನ ಬೆಂಬಲ ಸದಾ ಇರುತ್ತದೆ. ಆದರೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆ, ಹಲ್ಲೆ ಹಾಗೂ ನರಹತ್ಯೆಯನ್ನು ನಾನು ಅಷ್ಟೇ ಪ್ರಬಲವಾಗಿ ಖಂಡಿಸುತ್ತೇನೆ. ಇದರ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ನಾನು ಖಂಡಿಸುತ್ತೇನೆ. ನಾನು ನನ್ನೆಲ್ಲಾ ಸಾಮಾಜಿಕ ಚಟುವಟಿಕೆಗಳನ್ನು ರಾಜಕೀಯದ ಸೋಂಕಿಲ್ಲದೇ, ಪ್ರಾಮಾಣಿಕತೆ ಯಿಂದ ನಡೆಸುತಿದ್ದೇನೆ. ಆದರೂ ಕೆಲವು ಬುದ್ಧಿಜೀವಿಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತಿದ್ದಾರೆ ಎಂದವರು ಬೇಸರ ವ್ಯಕ್ತಪಡಿಸಿದರು.
ನಾಳೆ ನಡೆಯುವ ಕಾರ್ಯಕ್ರಮ ದಲಿತ ವಿರೋಧಿಯಲ್ಲ. ಅವರನ್ನು ಸೇರಿಸಿಕೊಂಡೇ ನಡೆಯುವ ಕಾರ್ಯಕ್ರಮ. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಸಹಕರಿಸಬೇಕು. ಭಾವಾವೇಶದಿಂದ ಯಾವುದೇ ಹಿಂಸೆ, ಹಲ್ಲೆಗೆ ಅವಕಾಶ ನೀಡಬಾರದು ಎಂದು ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ. ನಾಳೆ ಶಾಂತಿಗೆ ಭಂಗವಾಗುವ ಯಾವುದೇ ಘಟನೆ ನಡೆದರೂ ನಾನು ಉಪವಾಸವನ್ನು ಮಾಡುವ ಎಚ್ಚರಿಕೆ ನೀಡುತ್ತೇನೆ ಎಂದು ಪೇಜಾವರ ಶ್ರೀಗಳು ನುಡಿದರು.







