ಸಣ್ಣ, ಮಧ್ಯಮ ಉದ್ದಿಮೆದಾರರಿಗೆ ಕಾರ್ಯಾಗಾರ ಉದ್ಘಾಟನೆ

ಮಣಿಪಾಲ, ಅ.22: ಕೇವಲ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಉದ್ದಿಮೆದಾರನಿಗೂ ತನ್ನ ಸಂಸ್ಥೆಯ ನಿರ್ವಹಣೆ ಮತ್ತು ಅಭಿವೃದ್ಧಿ ಮಾಹಿತಿಯ ಅಗತ್ಯವಿದೆ ಎಂದು ಉಡುಪಿ ಚೇಂಬರ್ ಆ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಕೃಷ್ಣ ರಾವ್ ಕೊಡಂಚ ಹೇಳಿದ್ದಾರೆ. ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆ್ ಮ್ಯಾನೇಜ್‌ಮೆಂಟ್, ಉಡುಪಿ ಚೇಂಬರ್ ಕಾಮರ್ಸ್ ಹಾಗೂ ಭಾರತೀಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ) ವತಿಯಿಂದ ಮಣಿಪಾಲ ಹೋಟೆಲ್ ಮಧುವನ್ ಸೆರಾಯ್‌ನಲ್ಲಿ ಶನಿವಾರ ಆರಂಭಗೊಂಡ ಮೂರು ದಿನಗಳ ಸಣ್ಣ, ಮಧ್ಯಮ ಉದ್ದಿಮೆದಾರರಿಗೆ ನಿರ್ವಹಣೆ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಉದ್ದಿಮೆದಾರರಿಗೆ ಅದರಲ್ಲೂ ವಿಶೇಷ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಮಾರ್ಗದರ್ಶನದ ಅಗತ್ಯವಿದೆ. ನಮ್ಮ ಜ್ಞಾನವನ್ನು ಹೆಚ್ಚಿಸಿ ಕೊಂಡಾಗ ಮಾತ್ರ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ. ಜ್ಞಾನಗಳಿಕೆಗೆ ಇಂಥ ಕಾರ್ಯಾಗಾರಗಳು ಉಪಯುಕ್ತ. ಇಲ್ಲಿ ಕೇವಲ ಉಪನ್ಯಾಸಗಳು ಮಾತ್ರವಲ್ಲ ಸಂವಾದಗಳು ಹೆಚ್ಚುಹೆಚ್ಚು ನಡೆಯಬೇಕು ಎಂದವರು ನುಡಿದರು.
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ.ಕೆ.ಶಂಕರನ್ ಮಾತನಾಡಿ, ಒಂದು ಜಿಲ್ಲೆ, ಪ್ರದೇಶದ ಪ್ರಗತಿಗೆ ಅಲ್ಲಿನ ಸಣ್ಣ ಮತ್ತು ಮಧ್ಯಮ ಉದ್ದಿಮೆ ಗಳನ್ನು ಬಲಪಡಿಸಬೇಕಾಗಿದೆ. ಸ್ಥಳೀಯ ಕೈಗಾರಿಕೆಗಳಿಗೆ ಬೇಡಿಕೆ ಬಹಳಷ್ಟಿದೆ. ಸ್ಥಳೀಯ ಸಣ್ಣ, ಮಧ್ಯಮ ಕೈಗಾರಿಕೆಗಳನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳಲು, ಸಣ್ಣ ಕೈಗಾರಿಕೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂಥ ಕಾರ್ಯಾಗಾರ ಉಪಯೋಗವಾಗಲಿದೆ ಎಂದರು.
ಸಂಸ್ಥೆಯ ಡೀನ್ (ಕಾರ್ಪೋರೇಟ್ ಪ್ರೋಗ್ರಾಮ್) ಡಾ.ಎ.ಪಿ.ಆಚಾರ್ ಸ್ವಾಗತಿಸಿದರು. ಚೇಂಬರ್ ಆ್ ಕಾಮರ್ಸ್‌ನ ಜೊತೆ ಕಾರ್ಯದರ್ಶಿ ಡಾ. ವಿಜಯೇಂದ್ರ ವಸಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪಿ.ನಟರಾಜ್ ಪ್ರಭು ವಂದಿಸಿದರು. ಚಂದನ್ ಕಾರ್ಯಕ್ರಮ ನಿರೂಪಿಸಿದರು.







