ಒಳ್ಳೆಯ ಹವ್ಯಾಸದಿಂದ ವ್ಯಕ್ತಿತ್ವ ಬೆಳವಣಿಗೆ: ಡಾ.ಭಂಡಾರಿ

ಉಡುಪಿ, ಅ.22: ಮಕ್ಕಳು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಈ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಶ್ರಯದಲ್ಲಿ ಶನಿವಾರ ಉಡುಪಿಯ ಕಾರ್ಪೊರೇಶನ್ ಬ್ಯಾಂಕ್ ಸಭಾಂಗಣದಲ್ಲಿ ಮದ್ಯ ವ್ಯಸನಿಗಳ ಮಕ್ಕಳಿಗಾಗಿ ಆಯೋಜಿಸಲಾದ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹದ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಉತ್ತಮ ಹವ್ಯಾಸಗಳಿಗೆ ಪೋಷಕರ ಪ್ರೋತ್ಸಾಹ ಅತ್ಯಗತ್ಯ. ಸಾಮಾನ್ಯ ಜ್ಞಾನದಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಪೊರೇಶನ್ ಬ್ಯಾಂಕ್ ಸ್ಥಾಪಕ ಶಾಖೆಯ ಸಹಾಯಕ ಮಹಾಪ್ರಬಂಧಕ ರಾಜೇಂದ್ರ ಪ್ರತಾಪ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬ್ಯಾಂಕ್‌ನ ಹೆರಿಟೇಜ್ ಮ್ಯೂಸಿಯಂನ ಎಂ.ಕೆ.ಕೃಷ್ಣಯ್ಯ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹದ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸುವುದು ಹೇಗೆ? ಎಂಬ ವಿಷಯ ಕುರಿತು ಮಾತನಾಡಿದರು.
ಬಾಳಿಗಾ ಆಸ್ಪತ್ರೆಯ ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಜಯಲಕ್ಷ್ಮೀ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.





