ಫಡ್ನವೀಸ್ ಮಧ್ಯಪ್ರವೇಶದಿಂದ ‘ಮುಶ್ಕಿಲ್’ ಬಿಡುಗಡೆ ವಿವಾದ ಸುಖಾಂತ್ಯ
ಮುಂಬೈ, ಅ.22: ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಕರಣ್ ಜೋಹರ್ ನಿರ್ಮಿಸಿರುವ ‘ಯೇ ದಿಲ್ ಹೈ ಮುಶ್ಕಿಲ್’ ಚಿತ್ರದ ಕುರಿತಾದ ವಿವಾದವು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರ ಮಧ್ಯಪ್ರವೇಶದಿಂದಾಗಿ ಶನಿವಾರ ಕೊನೆಗೂ ಪರಿಹಾರವಾಗಿದೆ.
ಚಿತ್ರ ನಿರ್ಮಾಪಕ ಜೋಹರ್, ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಹಾಗೂ ಚಿತ್ರ ನಿರ್ಮಾಪಕರ ಗಿಲ್ಡ್‌ನ ಅಧ್ಯಕ್ಷ ಮುಕೇಶ್ ಭಟ್ ಮುಖ್ಯಮಂತ್ರಿ ಫಡ್ನವೀಸ್‌ರನ್ನು ಭೇಟಿಯಾದ ಬಳಿಕ, ಜೋಹರ್‌ರ ಸಿನೆಮಾದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಸೈನಿಕರನ್ನು ಗೌರವಿಸುವ ಸಂದೇಶವೊಂದು ಇರುತ್ತದೆ ಹಾಗೂ ಗಿಲ್ಡ್ ಇನ್ನು ಮುಂದೆ ಪಾಕಿಸ್ತಾನೀಯರೊಂದಿಗೆ ಕೆಲಸ ಮಾಡುವುದಿಲ್ಲವೆಂದು ಭಟ್ ಘೋಷಿಸಿದರು.
ಚಲನಚಿತ್ರದ ಲಾಭದ ಒಂದು ಪಾಲನ್ನು ಭಾರತೀಯ ಸಶಸ್ತ್ರ ಸೇನಾ ಸಿಬ್ಬಂದಿಯ ಕಲ್ಯಾಣಕ್ಕಾಗಿ ದೇಣಿಗೆ ನೀಡುವುದಕ್ಕೂ ಅದು ನಿರ್ಧರಿಸಿದೆ.
19 ಯೋಧರ ಬಲಿದಾನಕ್ಕೆ ಕಾರಣವಾದ ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿಯೇ ದಿಲ್ ಹೈ ಮುಶ್ಕಿಲ್ ಚಿತ್ರದಿಂದ ಫವಾದ್‌ಖಾನ್‌ರನ್ನು ತೆಗೆಯುವಂತೆ ಎಂಎನ್‌ಎಸ್ 3 ವಾರಕ್ಕೂ ಹೆಚ್ಚು ಕಾಲದಿಂದ ಆಗ್ರಹಿಸುತ್ತಿತ್ತು.
ಚಿತ್ರರಂಗಕ್ಕೂ ಸಹ ರಾಷ್ಟ್ರ ಹಾಗೂ ದೇಶಭಕ್ತಿ ಮೊದಲ ಆದ್ಯತೆಯ ವಿಷಯವಾಗಿದೆ. ತಾವು ಎಲ್ಲಕ್ಕಿಂತ ಹೆಚ್ಚು ಭಾರತೀಯ ಯೋಧರನ್ನು ಗೌರವಿಸುತ್ತೇವೆ. ಮುಂದೆ ತಮ್ಮ ಯಾವುದೇ ಚಿತ್ರದಲ್ಲಿ ಪಾಕಿಸ್ತಾನಿ ಕಲಾವಿದರನ್ನು ಹಾಕದಿರಲು ನಿರ್ಧರಿಸಿದ್ದೇವೆ. ಅಲ್ಲದೆ, ಸೇನಾ ನಿಧಿಗೆ ನಿರ್ದಿಷ್ಟ ಮೊತ್ತವನ್ನು ದೇಣಿಗೆ ನೀಡಲಿದ್ದೇವೆ. ಚಿತ್ರ ಲಾಭ ಗಳಿಸಲಿ ಬಿಡಲಿ, ಆ ಮೊತ್ತವನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್‌ರಿಗೆ ಹಸ್ತಾಂತರಿಸಲಾಗುವುದೆಂದು ಭಟ್ ಪತ್ರಕರ್ತರಿಗೆ ತಿಳಿಸಿದರು.
ಭಾರತೀಯ ಹುತಾತ್ಮ ಯೋಧರ ಗೌರವಾರ್ಥ ಚಿತ್ರ ಪ್ರದರ್ಶನದ ವೇಳೆ ಸ್ಲೈಡ್ ಒಂದನ್ನು ಪ್ರದರ್ಶಿಸಲಾಗುವುದು. ಕರಣ್‌ರ ತಂದೆ ಹಾಗೂ ನಿರ್ಮಾಪಕ ದಿ. ಯಶ್‌ಜೋಹರ್‌ರ ಗೌರವಾರ್ಥ ಸ್ಲೈಡ್ ಪ್ರದರ್ಶನದ ಮೊದಲು ಅದನ್ನು ಪ್ರದರ್ಶಿಸಲಾಗುವುದೆಂದು ಕರಣ್ ಜೋಹರ್ ಪ್ರಕಟಿಸಿದರು.





