ಜಾರ್ಖಂಡ್: ಗೋಲಿಬಾರ್‌ಗೆ ಬುಡಕಟ್ಟು ವ್ಯಕ್ತಿ ಬಲಿ
ರಾಂಚಿ,ಅ.22: ಜಾರ್ಖಂಡ್‌ನ ಖುತಿ ಜಿಲ್ಲೆಯಲ್ಲಿ ಶನಿವಾರ ತಮ್ಮಂದಿಗೆ ಘರ್ಷಣೆಗಿಳಿದ ಬುಡಕಟ್ಟು ಜನರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಓರ್ವ ಬುಡಕಟ್ಟು ವ್ಯಕ್ತಿ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಭೂಕಾಯ್ದೆ ತಿದ್ದುಪಡಿಯನ್ನು ಪ್ರತಿಭಟಿಸಿ ರಾಂಚಿಯಲ್ಲಿ ಶನಿವಾರ ನಡೆದ ರ್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಬುಡಕಟ್ಟು ಜನರು ತೆರಳುತ್ತಿದ್ದ ಸಂದರ್ಭದಲ್ಲಿ ಘರ್ಷಣೆ ಭುಗಿಲೆದ್ದಿತ್ತು.
ಗೋಲಿಬಾರ್ ನಡೆದ ಬಳಿಕ ಉದ್ರಿಕ್ತ ಬುಡಕಟ್ಟು ಜನರು ಪೊಲೀಸ್ ಸಿಬ್ಬಂದಿಯನ್ನು ಒತ್ತೆಸೆರೆಯಲ್ಲಿರಿಸಿಕೊಂಡಿದ್ದು, ಅವರನ್ನು ರಕ್ಷಿಸಲು ಭದ್ರತಾಪಡೆಗಳನ್ನು ಕುತಿ ಜಿಲ್ಲೆಗೆ ರವಾನಿಸಲಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘರ್ಷಣೆಯಲ್ಲಿ ಮೂವರು ಬುಡಕಟ್ಟು ಜನರಿಗೆ ಅತ್ಯಂತ ಗಂಭೀರವಾದ ಗಾಯಗಳಾಗಿದ್ದು ಅವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ಬುಡಕಟ್ಟು ಪ್ರದೇಶಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಕ್ಕಾಗಿ ಎರಡು ಭೂಕಾಯ್ದೆಗಳನ್ನು ತಿದ್ದುಪಡಿಗೊಳಿಸುವ ರಾಜ್ಯದ ಬಿಜೆಪಿ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿ ಆದಿವಾಸಿ ಸಂಘರ್ಷ ಮೋರ್ಚಾ (ಎಎಸ್‌ಎಂ)ವು ಶನಿವಾರ ರಾಂಚಿಯಲ್ಲಿ ‘ಆಕ್ರೋಶ್’ ರ್ಯಾಲಿಯನ್ನು ಆಯೋಜಿಸಿತ್ತು.





