ಭಾರತೀಯ ಸೇನೆಗೆ ಸ್ವರ್ಣ ಪದಕದ ಗರಿ
ಅಂತಾರಾಷ್ಟ್ರೀಯ ಮಟ್ಟದ ಪಹರೆ ಕಾರ್ಯ
ಹೊಸದಿಲ್ಲಿ, ಅ.22: ವಿಶ್ವದಲ್ಲೇ ಅತ್ಯಂತ ಕಠಿಣ, ಪ್ರಯಾಸಕರ ಪಹರೆಕಾರ್ಯ ಎನಿಸಿದ ಕ್ಯಾಂಬ್ರಿಡ್ಜ್ ಪಹರೆಕಾರ್ಯದಲ್ಲಿ ಭಾರತದ ಸೇನೆಯ ಗೂರ್ಖಾ ರೈಫಲ್ಸ್ ಪಡೆ ಸ್ವರ್ಣ ಪದಕ ಗಳಿಸಿದೆ. ಬ್ರಿಟಿಷ್ ಸೇನೆ ನಡೆಸಿದ ಈ ಕಾರ್ಯಕ್ರಮದಲ್ಲಿ 8 ಗೂರ್ಖಾ ರೈಫಲ್ಸ್‌ನ 2ನೆ ಬೆಟಾಲಿಯನ್ ಪ್ರತಿಷ್ಠಿತ ಸ್ವರ್ಣ ಪದಕ ಪಡೆಯಿತು.
ವೇಲ್ಸ್‌ನಲ್ಲಿರುವ ಬ್ರಿಟಿಷ್ ಸೇನೆಯ ಕಚೇರಿಯು ಈ ಸಾಧನೆಗೆ ಗೂರ್ಖಾ ಪಡೆಯನ್ನು ಅಭಿನಂದಿಸಿದ್ದು ಗೂರ್ಖಾ ಪಡೆಯವರು ಪದಕ ಸ್ವೀಕರಿಸುವ ಸಮಾರಂಭದ ವೀಡಿಯೊವನ್ನು ಟ್ವೀಟ್ ಮಾಡಿದೆ. ವೇಲ್ಸ್‌ನಲ್ಲಿರುವ ಒರಟಾದ ಕ್ಯಾಂಬ್ರಿಯನ್ ಪರ್ವತದ ಮೇಲೆ ನಡೆಸಲಾಗುವ ಅಂತಾರಾಷ್ಟ್ರೀಯ ಮಟ್ಟದ ಈ ಗಸ್ತುಕಾರ್ಯ, ಇಂದಿನ ದಿನಗಳಲ್ಲಿ ಯೋಧರಿಗೆ ಎದುರಾಗುವ ಅತ್ಯಂತ ಕಠಿಣ ಪರೀಕ್ಷೆ ಎನಿಸಿಕೊಂಡಿದೆ. ಇದರಲ್ಲಿ ಭಾಗವಹಿಸುವ ತಂಡಗಳು ತಮ್ಮ ಆಯುಧಗಳ ಪೆಟ್ಟಿಗೆಯನ್ನು ಹೊತ್ತುಕೊಂಡು ತಮಗೆ ವಹಿಸಿಕೊಡುವ ಕಾರ್ಯಗಳನ್ನು ನಿರ್ವಹಿಸಬೇಕು. 48 ಗಂಟೆಗಳ ಅವಧಿಯಲ್ಲಿ ಈ ‘ಟಾಸ್ಕ್’ ಪೂರ್ಣಗೊಳಿಸಬೇಕು. ನೀಡಲಾದ ಟಾಸ್ಕ್‌ಗಳ ನಿರ್ವಹಣೆಯ ಆಧಾರದಲ್ಲಿ ತಂಡಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಮಿಲಿಟರಿ ಕೌಶಲ್ಯ, ವಿಮಾನ, ವಾಹನ ಮತ್ತು ಆಯುಧಗಳನ್ನು ಗುರುತು ಹಿಡಿಯವುದು, ನಿಕಟ ಯುದ್ಧ ಕೌಶಲ್ಯ, ಮಾಧ್ಯಮ ನಿರ್ವಹಣೆ, ಯುದ್ದ ಕೈದಿಗಳನ್ನು ನಡೆಸಿಕೊಳ್ಳುವ ರೀತಿ, ರೇಡಿಯೊ ಸಂವಹನ ಮುಂತಾದ ಟಾಸ್ಕ್‌ಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಇದು ಒಂದು ಸ್ಪರ್ಧೆಯಲ್ಲ. 75% ಅಂಕ ಪಡೆದ ತಂಡಗಳಿಗೆ ಸ್ವರ್ಣ ಪದಕ, 65-74% ಅಂಕ ಪಡೆದ ತಂಡಗಳಿಗೆ ರಜತ, 55-64% ಅಂಕ ಪಡೆದ ತಂಡಗಳಿಗೆ ಕಂಚಿನ ಪದಕ ನೀಡಲಾಗುತ್ತದೆ. 55% ಅಂಕ ಪಡೆದ ತಂಡಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.





