ಗಿಲಾನಿ ಭೇಟಿಗೆ ಕುಟುಂಬವರ್ಗಕ್ಕೆ ಪ್ರತಿಬಂಧ; ಪುತ್ರನ ಬಂಧನ
ಶ್ರೀನಗರ, ಅ.22: ಹುರಿಯತ್ ನಾಯಕ ಸಯ್ಯದ್ ಅಲಿಶಾ ಗಿಲಾನಿ ಅವರ ಪುತ್ರ, ಶ್ರೀನಗರದ ಸರಕಾರಿ ಆಸ್ಪತ್ರೆಯ ವೈದ್ಯ ಡಾ ನಯೀಂ ಗಿಲಾನಿ ಅವರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶ್ರೀನಗರದಲ್ಲಿರುವ ಹೈದರ್‌ಪುರದಲ್ಲಿರುವ ತನ್ನ ತಂದೆಯ ನಿವಾಸಕ್ಕೆ ತೆರಳುತ್ತಿದ್ದ ಸಂದರ್ಭ ಬೆಳಿಗ್ಗೆ 10 ಗಂಟೆಯ ವೇಳೆಗೆ ಅವರನ್ನು ಬಂಧಿಸಲಾಗಿದೆ. ಶನಿವಾರ ಮಧ್ಯಾಹ್ನ ಸೈಯದ್ ಅಲಿಶಾ ಗಿಲಾನಿ ಟೆಲಿಫೋನ್‌ನಲ್ಲಿ ‘ರಾಷ್ಟ್ರವನ್ನುದ್ದೇಶಿಸಿ ಭಾಷಣ’ ಮಾಡುವ ಕಾರ್ಯಕ್ರಮವಿತ್ತು. ಪೊಲೀಸರು ಗಿಲಾನಿಯ ಕುಟುಂಬ ಸದಸ್ಯರು, ಮಾಧ್ಯಮದವರು ಮತ್ತು ಸಂದರ್ಶಕರು ಮನೆಯೊಳಗೆ ಪ್ರವೇಶಿಸಿದಂತೆ ತಡೆದರು. ಫೋನ್ ಸಂಪರ್ಕ ಬ್ಲಾಕ್ ಮಾಡುವ ಉದ್ದೇಶದಿಂದ ಗಿಲಾನಿಯವರ ಮನೆಯಲ್ಲಿ ಜಾಮರ್‌ಗಳನ್ನು ಅಧಿಕಾರಿಗಳು ಅಳವಡಿಸಿದರು. ಜುಲೈ 8ರಂದು ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರತಿಭಟನೆಯ ನೇತೃತ್ವ ವಹಿಸಿರುವ ಗಿಲಾನಿಯನ್ನು ಗೃಹಬಂಧನದಲ್ಲಿಡಲಾಗಿದೆ. ..................
ಸಿಪಿಎಂ ಕಾರ್ಯಕರ್ತನ ಮನೆಗೆ ನಾಡಬಾಂಬ್ ದಾಳಿ: ಭದ್ರತಾ ಸಿಬ್ಬಂದಿಗೆ ಗಾಯ
ಕಣ್ಣೂರು, ಅ.22: ಕಣ್ಣೂರು ಜಿಲ್ಲೆಯ ಚೆರುವಂಚೇರಿಯಲ್ಲಿ ಸಿಪಿಎಂ ಕಾರ್ಯಕರ್ತರೊಬ್ಬರ ಮನೆಗೆ ನಾಡಬಾಂಬೊಂದನ್ನು ಎಸೆಯಲಾಗಿದ್ದು, ಅವರ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆಂದು ಪೊಲೀಸರಿಂದು ತಿಳಿಸಿದ್ದಾರೆ.
ಘಟನೆಯು ನಿನ್ನೆ ಮಧ್ಯರಾತ್ರಿ 12:30ರ ಸುಮಾರಿಗೆ ನಡೆದಿದೆಯೆಂದು ಅವರು ಹೇಳಿದ್ದಾರೆ.
ಕೊತ್ತಪರಂಬು ಸಮೀಪದ ಪ್ರದೇಶ ಬಿಜೆಪಿಯ ಭದ್ರಕೋಟೆಯಾಗಿದೆ.
ಸಿಪಿಎಂ ಕಾರ್ಯಕರ್ತ ಅಶೋಕನ್ ಎಂಬವರು ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮುನ್ನ ಬಿಜೆಪಿಯನ್ನು ತ್ಯಜಿಸಿದ್ದರು. ಅವರಿಗೆ ಬೆದರಿಕೆಯಿದ್ದುದರಿಂದ ಭದ್ರತೆ ಒದಗಿಸಲಾಗಿತ್ತು. ಅಶೋಕನ್ ಭದ್ರತಾ ಸಿಬ್ಬಂದಿ ರಂಜಿತ್ ಎಂಬವರ ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಮನೆಯ ಕಿಟಕಿ ಬಾಗಿಲುಗಳಿಗೆ ಹಾನಿಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿಗೆ ಸಂಬಂಧಿಸಿದ ಕೆಲವು ವ್ಯಕ್ತಿಗಳನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆಯೆಂದು ಅವರು ಹೇಳಿದ್ದಾರೆ.







