ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಶಂಕಾಸ್ಪದ ಸಿಗ್ನಲ್‌ಗಳ ಮೇಲೆ ಹ್ಯಾಮ್ ಆಪರೇಟರ್‌ಗಳಿಂದ ನಿಗಾ

ಕೋಲ್ಕತಾ,ಅ.23: ಕಳೆದ ಕೆಲವು ತಿಂಗಳುಗಳಿಂದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕೋಡ್‌ಗಳಲ್ಲಿರುವ,ಬೆಂಗಾಲಿ ಮತ್ತು ಉರ್ದುಭಾಷೆಗಳ ಶಂಕಾಸ್ಪದ ಸಿಗ್ನಲ್‌ಗಳು ಹರಿದಾಡುತ್ತಿವೆ. ಇದು ಉಗ್ರವಾದಿಗಳು ಈ ಅಸಾಂಪ್ರದಾಯಿಕ ಸಂಪರ್ಕ ವಿಧಾನವನ್ನು ಬಳಸುತ್ತಿದ್ದಾರೆಂಬ ಶಂಕೆಯನ್ನು ಹುಟ್ಟುಹಾಕಿದ್ದು, ಅಧಿಕಾರಿಗಳು ದಿನದ 24 ಗಂಟೆಯೂ ಇವುಗಳ ಮೇಲೆ ನಿಗಾಯಿರಿಸಲು ಹ್ಯಾಮ್ ರೇಡಿಯೊ ಆಪರೇಟರ್‌ಗಳನ್ನು ನಿಯೋಜಿಸಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಹವ್ಯಾಸಿ ಹ್ಯಾಮ್ ರೇಡಿಯೊ ಆಪರೇಟರ್‌ಗಳು ಬಸ್ರಿಹಾತ್ ಮತ್ತು ಸುಂದರಬನ ಪ್ರದೇಶಗಳಲ್ಲಿ ಈ ಶಂಕಾಸ್ಪದ ರೇಡಿಯೋ ಸಿಗ್ನಲ್‌ಗಳನ್ನು ಮೊದಲ ಬಾರಿಗೆ ಗ್ರಹಿಸಿದ್ದು,ಸಂಭಾವ್ಯ ಅಪಾಯದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಅಂತಾರಾಷ್ಟ್ರೀಯ ನಿಗಾ ಕೇಂದ್ರ (ರೇಡಿಯೊ)ವನ್ನು ಸಂಪರ್ಕಿಸಿ ಈ ಸಿಗ್ನಲ್‌ಗಳ ಜಾಡು ಕಂಡುಹಿಡಿಯುವಂತೆ ಕೋರಿದ್ದರು.
ಈಗ 23 ಹ್ಯಾಮ್ ರೇಡಿಯೊ ಆಪರೇಟರ್‌ಗಳ ತಂಡವೊಂದು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು, ರೇಡಿಯೊ ಸಿಗ್ನಲ್‌ಗಳ ನಿಖರವಾದ ತಾಣವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ.
ಸಿಗ್ನಲ್‌ಗಳು ತೀವ್ರ ಶಂಕಾಸ್ಪದವಾಗಿದ್ದು,ದೇಶದ ಭದ್ರತೆಗೆ ಬೆದರಿಕೆಯಾಗಿವೆ. ನಾವು ಅವರೊಡನೆ ಸಂಭಾಷಿಸಲು ಯತ್ನಿಸಿದಾಗೆಲ್ಲ ಅವರು ಮಾತನಾಡುವುದನ್ನೇ ನಿಲ್ಲಿಸುತ್ತಾರೆ, ಕೆಲ ಸಮಯದ ಬಳಿಕ ಕೋಡ್‌ನಲ್ಲಿರುವ ಬೆಂಗಾಲಿ ಮತ್ತು ಉರ್ದು ಭಾಷೆಗಳಲ್ಲಿ ಸಂವಹನವನ್ನು ಪುನರಾರಂಭಿಸುತ್ತಾರೆ ಎಂದು ಬೆಂಗಾಲ್ ಹವ್ಯಾಸಿ ರೇಡಿಯೊ ಕ್ಲಬ್‌ನ ಕಾರ್ಯದರ್ಶಿ ಅಂಬರೀಷ ನಾಗ್ ಬಿಸ್ವಾಸ್ ತಿಳಿಸಿದರು.







