ಸಶಸ್ತ್ರ ಪಡೆಗಳಿಗೆ ದೀಪಾವಳಿ ಸಂದೇಶ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ಹೊಸದಿಲ್ಲಿ,ಅ.23: ದೇಶವನ್ನು ರಕ್ಷಿಸುತ್ತಿರುವ ಯೋಧರಿಗೆ ದೀಪಾವಳಿಯ ಸಂದೇಶಗಳನ್ನು ಕಳುಹಿಸುವಂತೆ ಜನತೆಯನ್ನು ಆಹ್ವಾನಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆಂದು ಅಧಿಕೃತ ಹೇಳಿಕೆಯು ರವಿವಾರ ತಿಳಿಸಿದೆ.
ತಮ್ಮ ಪ್ರೀತಿಪಾತ್ರರಿಂದ ದೂರವಾಗಿ ದೇಶದ ಗಡಿಗಳನ್ನು ಕಾಯುತ್ತಿರುವ ಭಾರತೀಯ ಸಶಸ್ತ್ರ ಪಡೆಗಳಲ್ಲಿ ದೀಪಾವಳಿಯ ಸಂದರ್ಭದಲ್ಲಿ ಸಂತೋಷವನ್ನು ಹರಡಲು ಪ್ರತಿಯೊಬ್ಬ ಭಾರತೀಯನಿಗೂ ಈ ಅಭಿಯಾನವು ಅವಕಾಶ ನೀಡುತ್ತದೆ ಎಂದು ಅದು ಹೇಳಿದೆ.
ನಮೋ ಆ್ಯಪ್,ಮೈಗವ್.ಇನ್ ಮತ್ತು ದೂರದರ್ಶನಗಳಲ್ಲಿ ಬಿಡುಗಡೆಗೊಂಡ ನಾಲ್ಕು ನಿಮಿಷಗಳ ವೀಡಿಯೊದಲ್ಲಿ ಮೋದಿ ಅವರು ದೀಪಾವಳಿಯಂದು ಯೋಧರಿಗೆ ಸಂದೇಶ ಗಳನ್ನು ಕಳುಹಿಸುವಂತೆ ಜನತೆಯನ್ನು ಕೋರಿಕೊಂಡಿದ್ದಾರೆ.
ಹಬ್ಬದ ದಿನಗಳಂದು ನಾವು ನಮ್ಮ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ. ನಮ್ಮ ಸುರಕ್ಷತೆಗಾಗಿ ತಮ್ಮ ಬದುಕು ಮತ್ತು ತಮ್ಮ ಸುಖವನ್ನು ಮುಡಿಪಾಗಿಟ್ಟಿರುವ ನಮ್ಮ ಯೋಧರಿಗೆ ನಿಮ್ಮ ಪ್ರೀತಿ ಮತ್ತು ಹಾರೈಕೆಗಳನ್ನು ಕಳುಹಿಸಿ ಎಂದು ಮೋದಿ ವೀಡಿಯೊ ದಲ್ಲಿ ಹೇಳಿದ್ದಾರೆ.
ಸಶಸ್ತ್ರ ಪಡೆಗಳೊಂದಿಗೆ ಜನತೆಯ ಭಾವನೆಗಳನ್ನು ಹಂಚಿಕೊಳ್ಳಲು ದೂರದರ್ಶನವೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಜನರು ಯೋಧರಿಗೆ ತಮ್ಮ ಶುಭಾಶಯಗಳು ಅಥವಾ ತಮ್ಮ ಸ್ವಹಸ್ತಾಕ್ಷರಗಳ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವಂತೆ ನರೇಂದ್ರ ಮೋದಿ ಆ್ಯಪ್‌ನಲ್ಲಿ ವಿಶೇಷ ಮಾಡ್ಯೂಲೊಂದನ್ನು ಆರಂಭಿಸಲಾಗಿದೆ.







