ಫೆಬ್ರವರಿ-ಮಾರ್ಚ್‌ನಲ್ಲಿ ಏಕಕಾಲದಲ್ಲಿ ಉ.ಪ್ರದೇಶ, ಇತರ ನಾಲ್ಕು ರಾಜ್ಯಗಳಲ್ಲಿ ಚುನಾವಣೆ

ಹೊಸದಿಲ್ಲಿ,ಅ.23: ಉತ್ತರ ಪ್ರದೇಶ,ಪಂಜಾಬ್,ಗೋವಾ,ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯಲಿವೆ. 2017,ಫೆ.2ರಂದು ಕೇಂದ್ರ ಮುಂಗಡಪತ್ರ ಮಂಡನೆಯ ಬೆನ್ನಿಗೇ ಫೆಬ್ರವರಿ-ಮಾರ್ಚ್‌ನಲ್ಲಿ ಈ ಚುನಾವಣೆ ಗಳು ನಡೆಯುವ ಹೆಚ್ಚಿನ ಸಾಧ್ಯತೆಗಳಿವೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದರೆ, ಉಳಿದ ನಾಲ್ಕು ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಎರಡು ವರ್ಷಗಳ ಹಿಂದೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳ ಪೈಕಿ 70ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ 15 ವರ್ಷಗಳ ಬಳಿಕ ಆಡಳಿತ ಎಸ್‌ಪಿಯಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಹವಣಿಕೆಯಲ್ಲಿದೆ. ಇವೆರೆಡೂ ಪಕ್ಷಗಳಿಗೆ ಬಿಎಸ್‌ಪಿ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಪಂಜಾಬ್‌ನಲ್ಲಿ ಸತತ ಎರಡು ಅಧಿಕಾರಾವಧಿಗಳ ಬಳಿಕ ಆಡಳಿತ ಎಸ್‌ಎಡಿ-ಬಿಜೆಪಿ ಮೈತ್ರಿಕೂಟವು ಒಂದೆಡೆ ಕಾಂಗ್ರೆಸ್‌ನಿಂದ ಮತ್ತು ಇನ್ನೊಂದೆಡೆ ಆಪ್‌ನಿಂದ ತೀವ್ರ ಸವಾಲು ಎದುರಿಸುತ್ತಿದೆ. ಉತ್ತರಾಖಂಡದಲ್ಲಿ ಕಾನೂನು ಸಮರದ ಬಳಿಕ ಮತ್ತೆ ಅಧಿಕಾರದ ಗದ್ದುಗೆಗೆ ಮರಳಿರುವ ಕಾಂಗ್ರೆಸ್ ಪಕ್ಷವು ಆಡಳಿತ ವಿರೋಧಿ ಅಲೆಯ ಜೊತೆಗೆ ಬಿಜೆಪಿಯ ಸವಾಲನ್ನೂ ಎದುರಿಸಬೇಕಿದೆ.
ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಗೋವಾದಲ್ಲಿ ಕಾಂಗ್ರೆಸ್ ಮತ್ತು ಆಪ್ ಕಠಿಣ ಸವಾಲನ್ನು ಒಡ್ಡಿವೆ. ಅತ್ತ ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರವನ್ನುಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಚುನಾವಣೆಗಳು ಪ್ರಕಟಗೊಂಡ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಟೀಕೆಯಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆ ಕ್ರಮವಾಗಿ ಸರಕಾರವು ಫೆ.1ರಂದು ಲೋಕಸಭೆಯಲ್ಲಿ ಮುಂಗಡಪತ್ರವನ್ನು ಮಂಡಿಸುವ ತನ್ನ ಪ್ರಸ್ತಾವನೆಗೆ ಒಪ್ಪಿಗೆ ಪಡೆದುಕೊಳ್ಳಲು ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು. ಮುಂಗಡಪತ್ರವು ಇಡೀ ದೇಶಕ್ಕೆ ಅನ್ವಯಿಸುತ್ತದೆ ಮತ್ತು ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ನಿರ್ದಿಷ್ಟವಾಗಿರುವುದಿಲ್ಲವಾದ್ದರಿಂದ ಫೆ.1ರಂದು ಮುಂಗಡಪತ್ರ ಮಂಡನೆಗೆ ಆಯೋಗವು ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿದವು. ಮುಂಗಡಪತ್ರದಲ್ಲಿ ಈ ರಾಜ್ಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಯಾವುದೇ ಜನಪ್ರಿಯ ಯೋಜನೆಗಳನ್ನು ಪ್ರಕಟಿಸದಂತೆ ಎಚ್ಚರಿಕೆ ವಹಿಸುವಂತೆಯೂ ಸರಕಾರಕ್ಕೆ ಆಯೋಗವು ಸೂಚಿಸಿದೆ.
ಮಾರ್ಚನೊಳಗೆ ಈ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದ್ದು, ಸೂಕ್ತ ವೇಳಾಪಟ್ಟಿ ತಯಾರಿಕೆಯಲ್ಲಿ ಆಯೋಗವು ನಿರತವಾಗಿದೆ.
ಉತ್ತರ ಪ್ರದೇಶ ವಿಧಾನಸಭೆಯ ಅವಧಿ ಮುಂದಿನ ವರ್ಷದ ಮೇ.27ರಂದು, ಗೋವಾ,ಮಣಿಪುರ ಮತ್ತು ಪಂಜಾಬ್‌ಗಳಲ್ಲಿ ಮಾ.18ರಂದು ಹಾಗೂ ಉತ್ತರಾ ಖಂಡ್‌ನಲ್ಲಿ ಮಾ.27ರಂದು ಅಂತ್ಯಗೊಳ್ಳಲಿವೆ.







