ಮಾದಕ ವಸ್ತುಗಳ ಸೇವನೆ ವಿರುದ್ಧ ಡಿವೈಎಫ್‌ಐ ಜನಾಂದೋಲನ

ಕೊಣಾಜೆ, ಅ.23: ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗಾಂಜಾ ಹಾವಳಿ, ಮಾದಕ ದ್ರವ್ಯ ಸೇವನೆ ವಿರುದ್ಧ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಡಿವೈಎಫ್‌ಐ ವತಿಯಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುನ್ನೂರು ಗ್ರಾಮದಾದ್ಯಂತ ಜನಾಂದೋಲನ ಜಾಥಾ ನಡೆಯಿತು. ಕುತ್ತಾರ್ ಜಂಕ್ಷನ್‌ನಲ್ಲಿ ರವಿವಾರ ಬೆಳಗ್ಗೆ ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಾಗ ನಡೆಯುವ ಕೋಮು ಗಲಭೆ, ಅಪರಾಧ ಪ್ರಕರಣ, ಅಶಾಂತಿ ಸೃಷ್ಟಿಯ ಹಿಂದೆ ಗಾಂಜಾ ಕೈವಾಡ ಇದೆ. ಸರಕಾರ ಮತ್ತು ಪೊಲೀಸ್ ಇಲಾಖೆ ಗಾಂಜಾ ನಿಷೇಧ ಹೇರಿದ್ದರೂ ಭಾವನಾತ್ಮಕವಾಗಿ ಜಾರಿಯಾಗಿಲ್ಲ. ಪೊಲೀಸರಿಗೆ ಹೆದರಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕುತ್ತಾರೆಯೇ ಹೊರತು ತಲೆ ಉಳಿಸುವುದಕ್ಕಲ್ಲ, ಸಾರಾಯಿ ನಿಷೇಧವಿದ್ದರೂ ಸೇವಿಸುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಮನಃಪರಿವರ್ತನೆ ಉಂಟುಮಾಡುವ ಕಾರ್ಯಕ್ರಮಗಳು ಅನಿವಾರ್ಯ ಎಂದರು.
ಉಳ್ಳಾಲ ಠಾಣಾ ನಿರೀಕ್ಷಕ ಶಿವಪ್ರಕಾಶ್ ಮಾತನಾಡಿ, ಯಾವುದೇ ಕೆಲಸ ಮಾಡುವಾಗಲೂ ಇದರಿಂದ ಸಮಾಜಕ್ಕಾಗುವ ಲಾಭ, ನಷ್ಟಗಳ ಚಿಂತನೆ ಅಗತ್ಯ. ಮನಪರಿವರ್ತನೆ ಎಂಬುದು ಯಾರೋ ಹೇಳಿ ಆಗುವ ಬದಲು ಸ್ವತಃ ಆಗಬೇಕಿದೆ. ದುಷ್ಟಶಕ್ತಿ ಮಟ್ಟಹಾಕುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆ, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಬೇಕು ಎಂದು ತಿಳಿಸಿದರು.
ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಸುದೇಶ್ ಕೆ.ದೆರೆಬೈಲ್, ಡಿವೈಎಫ್‌ಐ ಉಳ್ಳಾಲ ವಲಯಾಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಕಾರ್ಯದರ್ಶಿ ಜೀವನ್‌ರಾಜ್ ಕುತ್ತಾರ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಮುನ್ನೂರು ಗ್ರಾಮ ಸಮಿತಿ ಸಂಚಾಲಕ ಸುನಿಲ್ ತೇವುಲ, ಸಹ ಸಂಚಾಲಕ ಭರತ್‌ರಾಜ್ ಕೆ., ಸುರೇಶ್ ಪೂಜಾರಿ ತಲೆನೀರು, ಡಿವೈಎಫ್‌ಐ ಉಳ್ಳಾಲ ವಲಯ ಉಪಾಧ್ಯಕ್ಷ ರಫೀಕ್ ಹರೇಕಳ, ಪ್ರಮುಖರಾದ ಮಹಾಬಲ ದೆಪ್ಪೆಲಿಮ್ಮಾರ್, ಇಬ್ರಾಹೀಂ ಅಂಬ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್‌ರಾಜ್ ಕುತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನ್ನೂರು ಘಟಕ ಜಾಥಾ ಸಂಚಾಲಕ ಸುನಿಲ್ ಕುಮಾರ್ ತೇವುಲ ವಂದಿಸಿದರು. ಸದಸ್ಯ ಚಂದ್ರಹಾಸ ಕಾರ್ಯಕ್ರಮ ನಿರೂಪಿಸಿದರು.







