ಏಶ್ಯನ್ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ :ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಕ್ವಾಂಟನ್(ಮಲೇಶ್ಯ), ಅ.23: ನಾಲ್ಕನೆ ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಇಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-2 ಗೋಲುಗಳ ಭರ್ಜರಿ ಜಯ ಗಳಿಸಿದೆ.
ಕ್ವಾಂಟನ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಪಂದ್ಯದ 23ನೆ ನಿಮಿಷದಲ್ಲಿ ಯುವ ಸ್ಟ್ರೈಕರ್ ಪ್ರದೀಪ್ ಮೊರ್ ಅವರು 22ನೆ ನಿಮಿಷದಲ್ಲಿ ಚೊಚ್ಚಲ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು.
13ನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ 24ರ ಹರೆಯದ ಪ್ರದೀಪ್ ಒಲಿಂಪಿಕ್ಸ್‌ನಲ್ಲಿ ಮೀಸಲು ಆಟಗಾರನಾಗಿದ್ದರು. ಇಂದಿನ ಪಂದ್ಯದಲ್ಲಿ ಪ್ರದೀಪ್ ಗೋಲು ಭಾರತಕ್ಕೆ ಆರಂಭದಲ್ಲೇ ಮುನ್ನಡೆ ದೊರಕಿಸಿಕೊಟ್ಟಿದ್ದರೂ, ಭಾರತದ ಮೇಲುಗೈ ಹೆಚ್ಚು ಹೊತ್ತು ಇರಲಿಲ್ಲ. 31ನೆ ನಿಮಿಷದಲ್ಲಿ ಪಾಕಿಸ್ತಾನ ಮುಹಮ್ಮದ್ ರಿಝ್ವಾನ್ ಸೀನಿಯರ್ ಮತ್ತು 39ನೆ ನಿಮಿಷದಲ್ಲಿ ಮುಹಮ್ಮದ್ ಇರ್ಫಾನ್ ಜೂನಿಯರ್ ಗೋಲು ಕಬಳಿಸಿ ಪಾಕಿಸ್ತಾನಕ್ಕೆ 2-1 ಮುನ್ನಡೆ ಸಾಧಿಸಲು ನೆರವಾದರು.
ಭಾರತದ ರೂಪಿಂದರ್ ಪಾಲ್ ಸಿಂಗ್ 43ನೆ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿದರು. ಒಂದು ನಿಮಿಷದ ಬಳಿಕ ರಮಣ್‌ದೀಪ್ ಸಿಂಗ್ (44ನೆ ನಿಮಿಷ) ಗೋಲು ಜಮೆ ಮಾಡಿ ಪಾಕ್‌ಗೆ ತಿರುಗೇಟು ನೀಡಿದರು.
ಭಾರತ 3-2 ಗೋಲುಗಳ ಮುನ್ನಡೆ ಕಾಯ್ದುಕೊಂಡಿತು. ಪಾಕಿಸ್ತಾನಕ್ಕೆ ಮತ್ತೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಭಾರತ ಆಡಿರುವ ಮೂರು ಪಂದ್ಯಗಳ ಪೈಕಿ ಜಪಾನ್ ವಿರುದ್ಧ ಮೊದಲ ಪಂದ್ಯದಲ್ಲಿ 10-2 ಅಂತರದಲ್ಲಿ ಭರ್ಜರಿ ಜಯ ಗಳಿಸಿತ್ತು. ಶನಿವಾರ ದಕ್ಷಿಣ ಕೊರಿಯಾ ವಿರುದ್ಧ 1-1 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿತ್ತು. ಇದೀಗ ಆರು ರಾಷ್ಟ್ರಗಳ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.
ಎರಡು ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಆತಿಥೇಯ ಮಲೇಶ್ಯ ವಿರುದ್ಧ 2-4 ಅಂತರದಲ್ಲಿ ಸೋಲು ಅನುಭವಿಸಿತ್ತು. ದಕ್ಷಿಣ ಕೊರಿಯಾ ವಿರುದ್ಧ ಎರಡನೆ ಪಂದ್ಯದಲ್ಲಿ 1-0 ಅಂತರದಲ್ಲಿ ಜಯ ಗಳಿಸಿತ್ತು.







