ಸಿಂಧು ಜಲಾನಯನ ಪ್ರದೇಶದಲ್ಲಿ ನೀರಾವರಿ ಯೋಜನೆಗಳ ತ್ವರಿತಕ್ಕೆ ಸರಕಾರದ ನಿರ್ಧಾರ

ಹೊಸದಿಲ್ಲಿ,ಅ.23: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಹದಗೆಡುತ್ತಿರುವ ನಡುವೆಯೇ ಜಮ್ಮು-ಕಾಶ್ಮೀರದಲ್ಲಿ ನೀರಾವರಿ ಪ್ರದೇಶವನ್ನು ಸುಮಾರು 2.05 ಲಕ್ಷ ಎಕರೆಗಳಷ್ಟು ಹೆಚ್ಚಿಸಲು ಸಿಂಧು ನದಿ ಕೊಳ್ಳದಲ್ಲಿಯ ನಾಲ್ಕು ನೀರಾವರಿ ಯೋಜನೆಗಳ ಕಾಮಗಾರಿಯನ್ನು ತ್ವರಿತಗೊಳಿಸಲು ಕೇಂದ್ರ ಸರಕಾರವು ಯೋಜಿಸುತ್ತಿದೆ. ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತವು ಸಿಂಧು ನದಿ ನೀರು ಒಪ್ಪಂದದಡಿ ಝೇಲಂ ಸೇರಿದಂತೆ ಪಾಕಿಸ್ತಾನದ ನಿಯಂತ್ರಣದಲ್ಲಿರುವ ನದಿಗಳಲ್ಲಿಯ ತನ್ನ ಪಾಲಿನ ಗರಿಷ್ಠ ನೀರನ್ನು ಬಳಸಿಕೊಳ್ಳಲು ಇತ್ತೀಚಿಗೆ ನಿರ್ಧರಿಸಿತ್ತು.
ಈ ಯೋಜನೆಗಳ ಪೈಕಿ ಪುಲ್ವಾಮಾದಲ್ಲಿನ ಟ್ರಾಲ್ ನೀರಾವರಿ ಯೋಜನೆ, ಕಾರ್ಗಿಲ್‌ನ ಪ್ರಾಕಚಿಕ್ ಖೌಸ್ ಕಾಲುವೆ ಹಾಗೂ ಜಮ್ಮುವಿನ ಸಾಂಬಾ ಮತ್ತು ಕಥುವಾದ ಮುಖ್ಯ ರಾವಿ ಕಾಲುವೆಯ ಪುನರುಜ್ಜೀವನ ಮತ್ತು ಆಧುನೀಕರಣ ಇವು ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಜಪೋರಾ ಏತ ನೀರಾವರಿ ಯೋಜನೆ 2019,ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ.
ಈ ಎಲ್ಲ ಯೋಜನೆಗಳಿಗೆ 117 ಕೋ.ರೂ.ವೆಚ್ಚವಾಗುವ ನಿರೀಕ್ಷೆಯಿದ್ದು, ಈ ಹಣವನ್ನು ನಬಾರ್ಡ್ ಒದಗಿಸಲಿದೆ.
ಜಮ್ಮು-ಕಾಶ್ಮೀರದಲ್ಲಿ ಈವರೆಗೆ ಏಳು ಲಕ್ಷ ಎಕರೆ ಭೂಮಿ ನೀರಾವರಿ ಸೌಲಭ್ಯ ಕ್ಕೊಳಪಟ್ಟಿದೆ. ಇದು ಅತ್ಯಲ್ಪ ಪ್ರಮಾಣವಾಗಿದೆ. ಹೀಗಾಗಿ ರಾಜ್ಯದಲ್ಲಿಯ ಒಟ್ಟು ನೀರಾವರಿ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸಲು ಈ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿದವು.
ಭಾರತವು ತಾಂತ್ರಿಕವಾಗಿ ರಾಜ್ಯದ 13 ಲಕ್ಷ ಎಕರೆ ಭೂಮಿಗೆ ನೀರುಣ್ಣಿಸ ಬಹುದಾಗಿದೆ. ರಾಜ್ಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಸೌಲಭ್ಯವಿದ್ದರೆ ಈ ಗುರಿಯನ್ನು ಸಾಧಿಸಬಹುದಾಗಿದೆ ಎಂದ ಮೂಲಗಳು, ಯೋಜನೆ ಕಾಮಗಾರಿಗಳನ್ನು ಭಾರತದ ಹಕ್ಕಿನ ವ್ಯಾಪ್ತಿಯಲ್ಲಿಯೇ ನಡೆಸಲಾಗುತ್ತಿದೆ ಮತ್ತು ಇದು ಪಾಕಿಸ್ತಾನಕ್ಕೆ ನೀರಿನ ಹರಿವಿನ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದವು.







