ಬೈಕ್‌ಗೆ ಓಮ್ನಿ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಕಡಬ, ಅ.23: ಓಮ್ನಿ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಕಡಬದ ಏಮ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಚೇರು ರಾಮಣ್ಣ ಗೌಡ ಎಂಬವರ ಪುತ್ರ ಶ್ರೇಯಸ್ ಹಾಗೂ ಬಗ್ಪುಣಿ ದುಗ್ಗಪ್ಪ ಗೌಡ ಎಂಬವರ ಪುತ್ರ ಲಕ್ಷ್ಮೀಶ ಮೃತಪಟ್ಟ ವಿದ್ಯಾರ್ಥಿಗಳು.
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಓಮ್ನಿ ಹಾಗೂ ಸುಂಕದಕಟ್ಟೆಯಿಂದ ಕಡಬಕ್ಕೆ ತೆರಳುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಈ ಸಂದರ್ಭ ಬೈಕ್‌ನಲ್ಲಿದ್ದ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳು ಕಾಲೇಜಿನಿಂದ ಶಿವಮೊಗ್ಗಕ್ಕೆ ಪ್ರವಾಸ ಹೊರಟಿದ್ದರೆನ್ನಲಾಗಿದ್ದು, ಇದಕ್ಕಾಗಿ ಮನೆಯಿಂದ ಬೈಕಿನಲ್ಲಿ ಕಡಬಕ್ಕೆ ತೆರಳುತ್ತಿದ್ದರು. ಸುಂಕದಕಟ್ಟೆ ಸಮೀಪಿಸಿದಾಗ ವಿರುದ್ಧ ದಿಕ್ಕಿನಿಂದ ಆಗಮಿಸಿದ ಓಮ್ನಿಗೆ ಬೈಕ್ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿಡಲಾಗಿದೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





