ತಮ್ಮ ದೇಶಪ್ರೇಮವನ್ನು ಯಾರೂ ರುಜುವಾತು ಪಡಿಸಬೇಕಿಲ್ಲ:ನಿಹಲಾನಿ

ಮುಂಬೈ,ಅ.23: ಯಾರದ್ದೇ ಆದರೂ ದೇಶಪ್ರೇಮಕ್ಕೆ ರುಜುವಾತು ಒದಗಿಸುವಂತೆ ಕೇಳುವುದು ತಪ್ಪಾಗುತ್ತದೆ ಎಂದು ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಣ್ ಜೋಹರ್ ಅವರ ‘ಎ ದಿಲ್ ಹೈ ಮುಷ್ಕಿಲ್ ’ಚಿತ್ರದ ಬಿಡುಗಡೆ ಕುರಿತ ವಿವಾದದ ಹಿನ್ನೆಲೆಯಲ್ಲಿ ಅವರ ಈ ಅಭಿಪ್ರಾಯ ಹೊರಬಿದ್ದಿದೆ. ಪಾಕ್ ನಟ ಫವಾದ್ ಖಾನ್ ನಟಿಸಿದ್ದಾರೆಂಬ ಕಾರಣಕ್ಕೆ ತನ್ನ ಚಿತ್ರದ ಬಿಡುಗಡೆಯನ್ನು ವಿರೋಧಿಸುವವರಿಗೆ ವೀಡಿಯೋ ಮೂಲಕ ಇತ್ತಿಚಿಗೆ ವಿನಂತಿಸಿಕೊಂಡಿದ್ದ ಕರಣ್, ತಾನು ದೇಶಪ್ರೇಮಿ ಯಾಗಿದ್ದೇನೆ ಮತ್ತು ಭವಿಷ್ಯದಲ್ಲಿ ತನ್ನ ಚಿತ್ರಗಳಲ್ಲಿ ಪಾಕ್ ಕಲಾವಿದರನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದರು.
ಪಾಕಿಸ್ತಾನಿ ಕಲಾವಿದರ ಮೇಲೆ ನಿಷೇಧ ಕುರಿತ ಸುದ್ದಿಗಾರರ ಪ್ರಶ್ನೆಗೆ ಕರಣ್ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಉತ್ತರಿಸಿದ ನಿಹಲಾನಿ,ರಾಜಕೀಯ ಲಾಭಗಳಿಕೆಯ ಮೇಲೆ ಕಣ್ಣಿಟ್ಟಿರುವರು ಈ ವಾತಾವರಣವನ್ನು ಸೃಷ್ಟಿಸಿದ್ದಾರೆ ಮತ್ತು ಯಾರೂ ತಮ್ಮ ದೇಶಪ್ರೇಮ ವನ್ನು ಪುನರುಚ್ಚರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಪಾಕಿಸ್ತಾನಿ ಕಲಾವಿದರು ಮಾತ್ರವಲ್ಲ, ಆಮದು ಮತ್ತು ರಫ್ತನ್ನು ಕೂಡ ನಿಲ್ಲಿಸಬೇಕು. ನಮ್ಮ ಚಿತ್ರಗಳು ಅಲ್ಲಿಗೆ ದುಬೈ ಮೂಲಕ ಸೇರುತ್ತಿವೆ. ನಮ್ಮ ಚಿತ್ರಗಳನ್ನು ಅಲ್ಲಿಗೆ ಅಕ್ರಮವಾಗಿ ರಫ್ತು ಮಾಡಲಾಗುತ್ತಿದೆ ಎಂದು ಕುಟುಕಿದ ಅವರು, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ. ನಮ್ಮ ಚಿತ್ರ ನಿರ್ಮಾಪಕರ ಸಂಘ ಇಂಪಾದ ಸದಸ್ಯರೂ ತಾವು ಸ್ವತಃ ಚಿತ್ರವನ್ನು ನಿರ್ಮಿಸುತ್ತಿಲ್ಲವಾ ದರೂ ಪ್ರಚಾರ ಪಡೆಯಲು ‘ನಾವು ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುತ್ತೇವೆ ಎಂದು ಹೇಳಿದ್ದಾರೆ. ಚಿತ್ರ ಪ್ರದರ್ಶಕರ ಸಂಘವು ಕೂಡ ನಿಷೇಧದ ಮಾತನ್ನಾಡಿದೆ. ಯಾರೇ ಆದರೂ ತಮ್ಮ ದೇಶಪ್ರೇಮದ ಪ್ರಮಾಣಪತ್ರ ನೀಡುವ ಅಗತ್ಯವಿದೆ ಎಂದು ನಾನು ಭಾವಿಸಿಲ್ಲ. ಅದನ್ನು ಕೇಳುವವರು ತಪ್ಪು ಮಾಡುತ್ತಿದ್ದಾರೆ ಎಂದರು.
ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ‘ಎ ದಿಲ್....’ ಮೇಲಿನ ನಿಷೇಧವು ಭಾರತೀಯರಿಗೆ ನಷ್ಟವನ್ನುಂಟು ಮಾಡುತ್ತಿತ್ತು ಅಷ್ಟೇ. ಕರಣ್ ನಷ್ಟ ಅನುಭವಿಸಬೇಕಾಗುತ್ತಿತ್ತು. ಪಾಕ್ ನಟ ಹಣವನ್ನು ಪಡೆದುಕೊಂಡಿದ್ದಾನೆ ಮತ್ತು ಕಲೆ ಮತ್ತು ಸಂಸ್ಕೃತಿಯ ಮೂಲಕ ಆತ ಉಭಯ ರಾಷ್ಟ್ರಗಳ ನಡುವಿನ ಬಿರುಕನ್ನು ಮುಚ್ಚುವಲ್ಲಿ ತನ್ನ ಕೊಡುಗೆಯನ್ನು ಸಲ್ಲಿಸಿದ್ದಾನೆ. ಆತ ತನ್ನ ಕರ್ತವ್ಯವನ್ನು ಮಾಡಿದ್ದಾನೆ. ನಷ್ಟವೇನಿದ್ದರೂ ನಮ್ಮದೇ ಎಂದು ಹೇಳಿದರು.







