ಸೆಟಲ್ವಾಢ್ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಿದ್ದರು:ಎಚ್‌ಆರ್‌ಡಿ ಸಮಿತಿ ಪ್ರತಿಪಾದನೆ

ಹೊಸದಿಲ್ಲಿ,ಅ.23: ಸುಮಾರು 1.4 ಕೋ.ರೂ.ಅನುದಾನವನ್ನು ಮಂಜೂರು ಮಾಡಿದ್ದ ಆಗಿನ ಯುಪಿಎ ಸರಕಾರಕ್ಕಾಗಿ ಪಠ್ಯ ವಿಷಯಗಳನ್ನು ಸೃಷ್ಟಿಸಲು ತೀಸ್ತಾ ಸೆಟಲ್ವಾಡ್ ಮತ್ತು ಅವರ ಸಬರಂಗ್ ಟ್ರಸ್ಟ್ ‘ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಲು’ ಪ್ರಯತ್ನಿಸಿದ್ದರು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತ್ರಿಸದಸ್ಯ ಸಮಿತಿಯು ಪ್ರತಿಪಾದಿಸಿದೆ.
ಧರ್ಮ ಇತ್ಯಾದಿ ಕಾರಣಗಳ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ವೈರತ್ವವನ್ನು ಉತ್ತೇಜಿಸಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಅಖಂಡತೆಗೆ ಹಾನಿಕಾರಕವಾದ ಆರೋಪಗಳು ಹಾಗೂ ಹೇಳಿಕೆಗಳಿಂದಾಗಿ ಐಪಿಸಿಯ ಕಲಂ 153ಎ ಮತ್ತು 153ಬಿ ಅಡಿ ಅವರ ವಿರುದ್ಧ ಪ್ರಕರಣ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂಬ ಸಮಿತಿಯ ವಾದಕ್ಕೆ ಉನ್ನತ ಕಾನೂನು ಅಧಿಕಾರಿಯ ಸಮರ್ಥನೆ ದೊರಕಿದೆ. ಕಾನೂನು ಸಚಿವಾಲಯವು ಸಮಿತಿಯ ವರದಿಯ ಕುರಿತು ಈ ಅಭಿಪ್ರಾಯವನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಸೆಟಲ್ವಾಡ್ ಅವರ ಮಾಜಿ ನಿಕಟವರ್ತಿ ರಯೀಸ್ ಖಾನ್ ಪಠಾಣ್ ಮಾಡಿದ್ದ ಆರೋಪಗಳ ವಿಚಾರಣೆಗಾಗಿ ಮಾನವ ಅಭಿವೃದ್ಧಿ ಸಚಿವಾಲಯವು ನೇಮಕಗೊಳಿಸಿದ್ದ ಸಮಿತಿಯು ‘ಶಿಕ್ಷಣ ಕುರಿತು ರಾಷ್ಟ್ರೀಯ ನೀತಿ’ ಯೋಜನೆಯಡಿ ತನ್ನ ‘ಖೋಜ್’ ಯೋಜನೆಗಾಗಿ ಸೆಟಲ್ವಾಡ್ ಪಡೆದಿದ್ದ ಹಣಕಾಸಿನ ವಿತರಣೆ ಮತ್ತು ಬಳಕೆಯನ್ನು ಪರಿಶೀಲಿಸಿದೆ.
ಸಬರಂಗ್ ಟ್ರಸ್ಟ್‌ನ ಪ್ರಕಟಣೆಗಳು ದೇಶದ ಅಲ್ಪಸಂಖ್ಯಾತರಲ್ಲಿ ಅತೃಪ್ತಿಯನ್ನು ಹರಡಿವೆ ಮತ್ತು ಭಾರತವನ್ನು ಕೀಳಾಗಿ ಬಿಂಬಿಸಿವೆ ಹಾಗೂ ಅದು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಪಠಾಣ್ ತನ್ನ ದೂರಿನಲ್ಲಿ ಆರೋಪಿಸಿದ್ದರು.







