ರೂವಾರಿ ಕೊಲ್ಲಿ ರಾಷ್ಟ್ರಕ್ಕೆ ಪರಾರಿ!
ಕಾಲ್ ಸೆಂಟರ್ ಹಗರಣ
ಮುಂಬೈ, ಅ.23: ಕಾಲ್ ಸೆಂಟರ್ ಅವ್ಯವಹಾರಕ್ಕೆ ಸಂಬಂಧಿಸಿ ಥಾಣೆ ಪೊಲೀಸ್‌ನ ಕ್ರೈಂ ಬ್ರಾಂಚ್ ತಂಡಗಳು ನಕಲಿ ಕಾಲ್ ಸೆಂಟರ್‌ಗಳ ಮೇಲೆ ದಾಳಿಯಲ್ಲಿ ವ್ಯಸ್ತವಾಗಿದ್ದರೆ, ಅದರ ರೂವಾರಿ ಸಾಗರ್ ಅಲಿಯಾಸ್ ಶಾಗ್ಗಿ ಠಕ್ಕರ್ ಅ.5ರ ನಸುಕಿನಲ್ಲಿಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ.
ಅಮೆರಿಕದ ತೆರಿಗೆ ಇಲಾಖೆಯ ಅಧಿಕಾರಿಗಳಂತೆ ನಟಿಸಿ, ಅಲ್ಲಿನ ನಾಗರಿಕರ ಕೋಟ್ಯಂತರ ಹಣಕ್ಕೆ ಪಂಗನಾಮ ಹಾಕಿದ ಈ ಅವ್ಯವಹಾರದ ಸಂಬಂಧ ಕ್ರೈಂ ಬ್ರಾಂಚ್ ತಂಡಗಳು ಮೀರಾ ರೋಡ್‌ನ 7 ಕಾಲ್ ಸೆಂಟರ್‌ಗಳಿಗೆ ದಾಳಿ ನಡೆಸಿದೆ.
ಅ.4-5ರ ನಡುವಿನ ರಾತ್ರಿ ಪೊಲೀಸರು ಈ ದಾಳಿಗಳನ್ನು ನಡೆಸಿದ್ದರು. ಈ ಕಾಲ್ ಸೆಂಟರ್‌ಗಳ ಸುಮಾರು 70 ಮಂದಿ ನಿರ್ದೇಶಕರು ಹಾಗೂ ಪ್ರಮುಖ ವ್ಯಕ್ತಿಗಳನ್ನು ಬಂಧಿಸಲಾಗಿತ್ತು ಹಾಗೂ 700 ಉದ್ಯೋಗಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಬಂಧಿತರ ವಿಚಾರಣೆಯ ವೇಳೆ ಸಾಗರ್ ಅಲಿಯಾಸ್ ಶಾಗ್ಗಿಯ ಹೆಸರು ಪೊಲೀಸರಿಗೆ ತಿಳಿದು ಬಂದಿತ್ತು. ಆದರೆ, ಪೊಲೀಸರು ಆತನನ್ನು ತಲುಪುವಷ್ಟರಲ್ಲೇ ಅ.5ರಂದು ಶಾಗ್ಗಿ ದೇಶ ಬಿಟ್ಟು ಪರಾರಿಯಾಗಿದ್ದನು.
ಎಡರು ದಿನಗಳ ಬಳಿಕ ಅ.7ರಂದು ಪೊಲೀಸರು ಶಾಗ್ಗಿಯ ವಿರುದ್ಧ ಲುಕೌಟ್ ಸರ್ಕ್ಯುಲರ್(ಎಲ್‌ಒಸಿ) ಹೊರಡಿಸಿದ್ದರು. ಆತ ದುಬೈಗೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ.
ತನಿಖೆ ಆರಂಭವಾಗುತ್ತಿದ್ದಂತೆಯೇ, ಅ.8ರಂದು ಶಾಗ್ಗಿಯ ಅಕ್ಕ ಹಾಗೂ ಪ್ರಮುಖ ಆರೋಪಿ ರೀಮಾ ಎಂಬಾಕೆ ದಿಲ್ಲಿಯಿಂದ ವಿದೇಶಕ್ಕೆ ಪಲಾಯನ ಮಾಡಿದ್ದಳು. ಶಾಗ್ಗಿ ಹಾಗೂ ರೀಮಾರ ಬಳಿ ಅಮೆರಿಕದ ನಾಗರಿಕರಿಗೆ ಟೋಪಿ ಹಾಕಿದ ಅಪಾರ ಪ್ರಮಾಣದ ಹಣವಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.





