ರಾಜ್ ಠಾಕ್ರೆಯ ದೇಶಪ್ರೇಮವನ್ನು ಪ್ರಶ್ನಿಸಿ, ನನ್ನದಲ್ಲ: ಶಬಾನಾ ಆಝ್ಮಿ
ಮುಂಬೈ,ಅ.23: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ಬಿಡುಗಡೆಗೆ ಬೆದರಿಕೆಯೊಡ್ಡಿದ್ದ ಸಂಘಟನೆಗಳು ಮತ್ತು ಚಿತ್ರದ ನಿರ್ಮಾಪಕ ಕರಣ್ ಜೋಹರ್ ಅವರ ನಡುವೆ ಮಾಡಿಸಿರುವ ರಾಜಿಯ ಕುರಿತಂತೆ ಸೃಷ್ಟಿಯಾಗಿರುವ ಆಕ್ರೋಶವು ಮುಂದುವರಿದಿದೆ. ಖ್ಯಾತ ಬಾಲಿವುಡ್ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬಾನಾ ಆಝ್ಮಿ ಸೇರಿದಂತೆ ಹಲವರು ಈ ರಾಜಿಸೂತ್ರವನ್ನು ಪ್ರಶ್ನಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎ ದಿಲ್....’ಗೆ ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಯು ಅನುಮತಿ ನೀಡಿದೆ. ಗೃಹಸಚಿವ ರಾಜನಾಥ್ ಸಿಂಗ್ ಅವರು ಚಿತ್ರದ ನಿರಾತಂಕ ಬಿಡುಗಡೆಯ ಭರವಸೆ ನೀಡಿದ್ದಾರೆ. ಅಲ್ಲಿಗೆ ವಿವಾದವು ಮುಗಿಯಬೇಕಾಗಿತ್ತು ಎಂದು ಹೇಳಿದರು.
ಚಿತ್ರದ ನಿರಾತಂಕ ಬಿಡುಗಡೆಯ ಬಗ್ಗೆ ಗೃಹಸಚಿವರ ಭರವಸೆಯ ಬಳಿಕ ಮುಖ್ಯಮಂತ್ರಿಗಳ ಪಾತ್ರ ಸ್ಪಷ್ಟವಾಗಿತ್ತು. ಗೃಹ ಸಚಿವರ ಭರವಸೆಯನ್ನು ಉಳಿಸಲು ಅವರು ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಂಡಿದ್ದರೆ ಸಾಕಿತ್ತು. ಬದಲಿಗೆ ಅವರು ಚಿತ್ರ ನಿರ್ಮಾಪಕರು ಮತ್ತು ದೇಶಭಕ್ತಿಯನ್ನು ಪ್ರದರ್ಶಿಸಲು ಐದು ಕೋಟಿ ರೂ. ಬೆಲೆ ಕಟ್ಟಿರುವ ರಾಜ್ ಠಾಕ್ರೆ ನಡುವೆ ಸಂಧಾನಕ್ಕೆ ಮುಂದಾಗಿದ್ದು ತಪ್ಪು ಎಂದರು.
ಈ ನಾಚಿಕೇಡಿನ ವ್ಯವಹಾರಗಳು ಮತ್ತು ಸಂಘ ಪರಿವಾರದ ಇಬ್ಬಗೆ ನಿಲುವನ್ನು ಖಂಡಿಸಿದ ಆಝ್ಮಿ, ಬಿಜೆಪಿಯು ಕೇಂದ್ರ ಗೃಹಸಚಿವರ ಭರವಸೆಯನ್ನು ಅಗೌರವಿಸಿದ್ದಕ್ಕಾಗಿ ಫಡ್ನವೀಸ್ ಅವರಿಂದ ವಿವರಣೆಯನ್ನು ಕೇಳಬೇಕು ಎಂದು ಆಗ್ರಹಿಸಿದರು.
ನಾನು ದೇಶಪ್ರೇಮಿ ಹೌದೇ ಅಲ್ಲವೇ ಎನ್ನುವುದನ್ನು ರಾಜ್ ಠಾಕ್ರೆ ನಿರ್ಧರಿಸುತ್ತಾರೆಯೇ? ನಾನು ಭಾರತದ ಸಂವಿಧಾನಕ್ಕೆ ವಿಧೇಯಳಾಗಿದ್ದೇನೆ. ರಾಜ್ ಠಾಕ್ರೆ ವಿಧೇಯರಾಗಿಲ್ಲ. ಈಗ ಯಾರ ದೇಶಪ್ರೇಮವನ್ನು ಪ್ರಶ್ನಿಸಬೇಕು ಎಂದು ಆಝ್ಮಿ ಪ್ರಶ್ನಿಸಿದರು. .





