ಪಟಿಯಾಲದ ಯುವಕ ಕೆನಡಾದಲ್ಲಿ ನಾಪತ್ತೆ
ಬಂಧುಗಳಿಂದ ಸುಶ್ಮಾ ಸ್ವರಾಜ್‌ಗೆ ಮೊರೆ
ಪಟಿಯಾಲ,ಅ.23: ಕೆನಡಾದಲ್ಲಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿರುವ ತಮ್ಮ ಮಗನನ್ನು ಪತ್ತೆ ಹಚ್ಚಲು ನೆರವಾಗುವಂತೆ ಪತಿಯಾಳಾದ ಘುಮಾನ್ ನಗರದ ಕುಟುಂಬವೊಂದು ಇ-ಮೇಲ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಮೊರೆಯಿಟ್ಟಿದೆ.
ಸಿಮ್ರನ್‌ಜಿತ್ ಸಿಂಗ್(23) ಕಳೆದ ಮೂರು ವರ್ಷ ಗಳಿಂದಲೂ ವಿದ್ಯಾರ್ಥಿ ವೀಸಾದಲ್ಲಿ ಕೆನಡಾದಲ್ಲಿದ್ದು, ಒಂಟಾರಿಯೋದ ಹ್ಯಾಮಿಲ್ಟನ್‌ನಲ್ಲಿ ವಾಸವಾಗಿದ್ದ.
ಸಿಮ್ರನ್‌ಜಿತ್‌ನ ಸ್ನೇಹಿತನೋರ್ವ ಸಹ ಒಂಟಾರಿಯೋದಲ್ಲಿ ಶುಕ್ರವಾರ ನಾಪತ್ತೆ ದೂರನ್ನು ದಾಖಲಿಸಿದ್ದಾನೆ.
ಸಿಮ್ರನ್‌ನನ್ನು ಪತ್ತೆ ಹಚ್ಚುವ ಎಲ್ಲ ಪ್ರಯತ್ನಗಳೂ ವಿಫಲಗೊಂಡಿವೆ. ಆತ ಬುಧವಾರ ರಾತ್ರಿ ಮನೆಗೆ ಕರೆ ಮಾಡಿದ್ದ. ಆತ ಪರೀಕ್ಷೆಯಲ್ಲಿ ತನ್ನ ಕಳಪೆ ಸಾಧನೆಯಿಂದ ಖಿನ್ನಗೊಂಡಂತಿದ್ದ. ಅಲ್ಲದೆ ಕೆನಡಾದಲ್ಲಿ ಕೆಲಸಕ್ಕೆ ಅಂಟಿಕೊಳ್ಳಲೂ ಅವನಿಗೆ ಸಾಧ್ಯವಾಗಿರಲಿಲ್ಲ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಆತನ ತಂದೆ ಕೇವಲ್ ಸಿಂಗ್,ತಾನು ಈ ಹಿಂದೆ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸಿ ಎಂದು ಆತ ಕೇಳಿಕೊಂಡಿದ್ದು ತನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಅದೇ ದಿನ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ತನ್ನ ಸೋದರ-ಸೋದರಿಗೂ ಆತ ಕರೆ ಮಾಡಿ ಇದೇ ಮಾತನ್ನಾಡಿದ್ದಾನೆ ಎಂದು ತಿಳಿಸಿದರು.
ಮರುದಿನ ತಾನು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆನಾದರೂ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಕೆನಡಾದಲ್ಲಿರುವ ಆತನ ಆಪ್ತಮಿತ್ರರಿಗೂ ಆತ ಎಲ್ಲಿದ್ದಾನೆಂದು ಗೊತ್ತಿಲ್ಲ. ನಮಗೆ ನೆರವಾಗುವಂತೆ ಸ್ವರಾಜ್ ಅವರನ್ನು ಕೋರಿಕೊಂಡಿದ್ದೇವೆ ಎಂದರು.





