ಅಲ್ಪಸಂಖ್ಯಾತರ ವಿರುದ್ಧ ಪೂರ್ವಾಗ್ರಹ: ಏನಿದರ ಪೂರ್ವಾಪರ?

ದಿನೈದು ದಿನಗಳ ಹಿಂದೆ ಮುಂಬೈ ಉಪನಗರ ವಸಾಯಿಯಲ್ಲಿ ಹೌಸಿಂಗ್ ಸೊಸೈಟಿಯ ಮನೆಯೊಂದನ್ನು ಮುಸ್ಲಿಂ ಕುಟುಂಬಕ್ಕೆ ಮಾರಾಟ ಮಾಡಲು ತಡೆಯೊಡ್ಡಿದ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮನೆ ಮಾರಾಟ ಮಾಡಲು ಸೊಸೈಟಿಯಿಂದ ನಿರಾಕ್ಷೇಪಣಾ ಪತ್ರ ನೀಡಿರಲಿಲ್ಲ.
ಅಲ್ಪಸಂಖ್ಯಾತರನ್ನು ಹೊರಗಿಡುವ ಸಲುವಾಗಿ ಇಂಥ ಗುಂಪುಗಾರಿಕೆ ದೀರ್ಘಕಾಲದಿಂದ ಹಲವು ನಗರಗಳಲ್ಲಿ ನಡೆಯುತ್ತಲೇ ಇದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, 2014ರಲ್ಲಿ ಗುಜರಾತ್‌ನ ಹಿಂದೂ ಬಾಹುಳ್ಯದ ಭಾವನಗರದಲ್ಲಿ ಬಲಪಂಥೀಯ ಸಂಘಟನೆಗಳು ಧರಣಿ ನಡೆಸಿ, ಒಂದು ಮುಸ್ಲಿಂ ಕುಟುಂಬ ಬಂಗಲೆ ತೆರವುಗೊಳಿಸುವಂತೆ ಬಹಿರಂಗವಾಗಿ ಕಿರುಕುಳ ನೀಡಿರುವುದು. ಇಂಥ ಸಂಘಟನೆಗಳಿಂದ ಒಳ್ಳೆಯದೇನೂ ನಿರೀಕ್ಷಿಸುವಂತಿಲ್ಲವಾದರೂ, ಅದು ಸುಶಿಕ್ಷಿತ, ನಾಗರಿಕರೆನಿಸಿಕೊಂಡ, ನಗರವಾಸಿ ಮಧ್ಯಮವರ್ಗದ ಜನರ ಪೂರ್ವಾಗ್ರಹದ ಮನೋಪ್ರವೃತ್ತಿಯನ್ನು ಇದು ತೋರಿಸುವುದಿಲ್ಲವೇ?
ವಸಾಯಿ ಘಟನೆಯಲ್ಲಿ ಆ ವಸತಿ ಸಮುಚ್ಚಯದಲ್ಲಿ ಹಲವು ವರ್ಷಗಳಿಂದ ಎರಡು ಮುಸ್ಲಿಂ ಕುಟುಂಬಗಳು ವಾಸವಾಗಿತ್ತು. ಇಷ್ಟಾಗಿಯೂ ಮತ್ತೊಂದು ಮುಸ್ಲಿಂ ಕುಟುಂಬ ಅಲ್ಲಿಯ ನಿವಾಸಿಗಳ ಪಟ್ಟಿಗೆ ಸೇರದಂತೆ ಇತರ 11 ಸದಸ್ಯರು ಆಕ್ಷೇಪಿಸಲು ಪೂರ್ವಾಗ್ರಹ ಹಾಗೂ ಬಹುಸಂಖ್ಯಾತರ ದುರಭಿಮಾನವಲ್ಲದೇ ಇನ್ನೇನು ಕಾರಣ? ಕಾನೂನುಬದ್ಧವಾಗಿ ಮಾತನಾಡುವುದಾದರೆ ಅವರ ಕೃತ್ಯ ತಪ್ಪು ಎಂಬ ಅರಿವು ಅವರಿಗಿತ್ತು. ಸಹಕಾರಿ ಗೃಹನಿರ್ಮಾಣ ಸೊಸೈಟಿಗಳ ಕಾಯ್ದೆ ಅನ್ವಯ, ಯಾವ ಸೊಸೈಟಿ ಕೂಡಾ, ಅಲ್ಲಿನ ನಿವಾಸಿಗಳು ತಮ್ಮ ಆಸ್ತಿಯನ್ನು ತಮ್ಮ ಇಷ್ಟಬಂದವರಿಗೆ ಮಾರಾಟ ಮಾಡದಂತೆ ತಡೆಯುವ ಅಧಿಕಾರ ಹೊಂದಿರುವುದಿಲ್ಲ. ಅದು ಕೂಡಾ ಬೇಕಾಬಿಟ್ಟಿ ಕಾರಣಕ್ಕಂತೂ ಅವಕಾಶವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿರುವುದು ಭಾರತೀಯ ದಂಡಸಂಹಿತೆಯ ಸೆಕ್ಷನ್ 295 (ಎ) ಅನ್ವಯ ಕೂಡಾ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ ಅಪರಾಧವಾಗುತ್ತದೆ.
ಆದ್ದರಿಂದ ಇಂಥ ಬಹಿರಂಗ ವಿರೋಧ ವ್ಯಕ್ತವಾಗಲು ಮೂಲ ಕಾರಣವೆಂದರೆ, ಖರೀದಿದಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎನ್ನುವುದು. ಈ ಹಿನ್ನೆಲೆಯಲ್ಲೇ ಸೊಸೈಟಿಯ ಸದಸ್ಯರು ಕೈಗೊಂಡ ನಿರ್ಣಯಕ್ಕೆ ಬದ್ಧವಾಗಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ, ಇಂಥ ನಿರ್ಧಾರದ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾರರು ಎಂಬ ಹುಂಬ ಧೈರ್ಯ. ಏಕೆಂದರೆ ಅಧಿಕಾರಿಗಳು ಕೂಡಾ ಬಹುತೇಕ ಪ್ರಬಲ ಸಮುದಾಯಕ್ಕೇ ಸೇರಿದವರು.
ಆದರೆ ಅನಿರೀಕ್ಷಿತವಾಗಿ, ಈ 11 ಮಂದಿಯ ಆಕ್ಷೇಪದ ವಿರುದ್ಧ ಖರೀದಿದಾರ ದೂರು ನೀಡಿದಾಗ ಪೊಲೀಸರು ಇದರ ಬಗ್ಗೆ ಸೂಕ್ತ ಹಾಗೂ ಸಕಾಲಿಕ ಕ್ರಮಕೈಗೊಂಡು, 11 ಮಂದಿಯನ್ನು ಬಂಧಿಸಿದರು. ಇದರಿಂದಾಗಿ, 11 ಮಂದಿ ತಮ್ಮ ನಿರ್ಧಾರವನ್ನು ತಕ್ಷಣ ವಾಪಾಸು ಪಡೆದು ಎನ್‌ಒಸಿ ನೀಡಬೇಕಾಯಿತು ಮಾತ್ರ ವಲ್ಲದೆ, ಖರೀದಿದಾರನ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಕ್ಕೆ ಕ್ಷಮೆಯನ್ನೂ ಯಾಚಿಸಬೇಕಾಯಿತು.
ಬೇಸರದ ಸಂಗತಿಯೆಂದರೆ, ಇಂಥ ಪೂರ್ವಾಗ್ರಹ ಮನೋಭಾವ ವ್ಯಾಪಕವಾಗಿ ಸಮಾಜದಲ್ಲಿ ಬೇರುಬಿಟ್ಟಿದೆ. ಅಲ್ಪಸಂಖ್ಯಾತ ಬಾಡಿಗೆ ದಾರರು ಅಥವಾ ಮನೆ ಖರೀದಿದಾರರನ್ನು ಪ್ರತ್ಯಕ್ಷ ಅಥವಾ ಪರೋಕ್ಷ ವಿಧಾನದ ಮೂಲಕ ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ.
ಇಂತಹ ಅಘೋಷಿತ ಒಮ್ಮತವನ್ನು ಯಾವ ಮುಲಾಜೂ ಇಲ್ಲದೇ ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜೀವನ ಹಾಗೂ ಸಾಂಸ್ಕೃತಿಕ ತಳಹದಿಯನ್ನು ಕಾಪಾಡಿಕೊಳ್ಳುವ ಜತೆಗೆ, ನಮ್ಮ ವಾಸ ಪ್ರದೇಶಗಳಲ್ಲಿ ಇತರರಿಗೆ ಕೂಡಾ ಭೌತಿಕವಾಗಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ಉದಾಹರಣೆಗೆ ಮುಂಬೈ ಘಟನೆಯ ಬೆನ್ನಲ್ಲೇ ಬಹಿರಂಗವಾದ ಮತ್ತೊಂದು ಘಟನೆಯನ್ನು ತೆಗೆದುಕೊಳ್ಳೋಣ. ಗುಜರಾತ್‌ನ ಬರೂಚ್ ಹಾಗೂ ಮಾಂಡ್ವಿಯಲ್ಲಿ, ಮುಸ್ಲಿಮರು ಗಾರ್ಬಾ ಮತ್ತು ದಾಂಡಿಯಾ ಉತ್ಸವಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ. ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಉದ್ಭವಿಸುವುದನ್ನು ತಡೆಯಲು ಅಥವಾ ಮತ್ತೊಂದು ಸಮುದಾಯವನ್ನು ಅವಹೇಳನ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ವಾಸ್ತವವಾಗಿ ಕೇವಲ ವಿಕ್ಷಿಪ್ತ ಶಕ್ತಿಗಳಿಗೆ ಮಾತ್ರ ಇದನ್ನು ಸೀಮಿತ ಗೊಳಿಸಿದರೆ ಸಾಕು ಎನ್ನುವುದು ಸಾಮಾನ್ಯರಿಗೂ ಹೊಳೆಯುವ ವಿಚಾರ.
ಶಿಕ್ಷಣ ಯಾವುದೇ ಬದಲಾವಣೆ ಮಾಡಿಲ್ಲ ಎಂದಾದರೆ, ಇಂಥ ಪ್ರಬಲವಾದ ಪೂರ್ವಾಗ್ರಹವನ್ನು ಮೀರಲು ಎಂದಾದರೂ ಪ್ರಯತ್ನಿಸಿದ್ದೇವೆಯೇ? ಈ ಮನೋಭಾವದ ಹಿಂದೆ ವಾಸ್ತವವಾಗಿ ಏನಿದೆ? ದೇಶದಲ್ಲಿ ಶೇ. 80ಕ್ಕಿಂತ ಹೆಚ್ಚು ಮಂದಿ ಬಹುಸಂಖ್ಯಾತ ಹಿಂದೂಗಳಿದ್ದರೂ, ಈ ಅಭದ್ರತೆಯ ಭೀತಿ ಅವರನ್ನು ಏಕೆ ಆವರಿಸಿದೆ? ಅಲ್ಪಸಂಖ್ಯಾತರ ಬಗ್ಗೆ ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಬಗ್ಗೆ ದ್ವೇಷಭಾವನೆ ಏಕೆ?
ನಮ್ಮ ಅಸ್ತಿತ್ವದ ಬಗ್ಗೆ, ಅವರು ನಮ್ಮ ನೆರೆಯವರಾಗಿಯೂ ಇರಬಾರದು, ನಮ್ಮ ದೃಷ್ಟಿಯಿಂದಾಚೆಗೆ ಇರಬೇಕು ಎಂದು ನಾವು ಯಾಕೆ ಅಷ್ಟೊಂದು ಭೀತರಾಗಬೇಕು, ಅವರನ್ನು ಅನಪೇಕ್ಷಿತ ಎಂದು ನಾವು ಪರಿಗಣಿಸುತ್ತೇವೆ?
ಒಂದು ಕಾಲದಲ್ಲಿ ನಾವು ಅದನ್ನು ಒಪ್ಪಲು ಸಿದ್ಧವಿರಲಿಲ್ಲ. ಆದರೆ ಇಂದು ಬಹುತೇಕ ಮಂದಿ ಅದನ್ನು ಗೌರವದ ಮುದ್ರೆಯಾಗಿ ಮುಕ್ತವಾಗಿ ಅಭಿವ್ಯಕ್ತಿಗೊಳಿಸುವ ಹಂತಕ್ಕೆ ಬಂದಿದ್ದಾರೆ. ಖ್ಯಾತ ನಟ ನವಾಝುದ್ದೀನ್ ಸಿದ್ದೀಕಿ, ಉತ್ತರ ಪ್ರದೇಶದ ತಮ್ಮ ಹುಟ್ಟೂರ ರಾಮಲೀಲಾ ಉತ್ಸವದಲ್ಲಿ ನಟಿಸುವುದಕ್ಕೆ, ಆತ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೂಡಾ ಸಂಕುಚಿತ ಮನೋಭಾವದ, ಪೂರ್ವಾಗ್ರಹಪೀಡಿತ ವ್ಯಕ್ತಿತ್ವದ ಮತ್ತೊಂದು ರೂಪಾಂತರ.
ಹುಟ್ಟುಹಾಕಿದ ಸಿಟ್ಟು
ಬಲಪಂಥೀಯ ಸಂಘಟನೆಗಳು ಅಪಪ್ರಚಾರ ಮಾಡಿ, ಬೆಳೆಸಿದ ಇಂಥ ಮನೋಭಾವಕ್ಕೆ ಬಹಳಷ್ಟು ಕಾರಣಗಳಿರಬಹುದು. ಮೊಘಲರ ಆಡಳಿತದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದಿದೆ ಎಂಬ ವಾದದಿಂದ ಹಿಡಿದು, ಜಾತ್ಯತೀತತೆ, ಕಾಂಗ್ರೆಸ್ ಸರಕಾರ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎಂಬ ಆರೋಪ, ಧಾರ್ಮಿಕ ಮತಾಂಧತೆ, ಕಾಶ್ಮೀರಿ ಭಯೋತ್ಪಾದನೆ, ಪಾಕಿಸ್ತಾನದ ಉಗ್ರಗಾಮಿ ಚಟುವಟಿಕೆ ಹೀಗೆ ಹತ್ತು ಹಲವು ಅಪಪ್ರಚಾರಗಳನ್ನು ವ್ಯವಸ್ಥಿತವಾಗಿ ಮಾಡಲಾಗಿದೆ.
ಇದರ ಜತೆಗೆ ಮುಸ್ಲಿಮರ ವಿರುದ್ಧ ಬಹುಪತ್ನಿತ್ವ, ಗೋಮಾಂಸ ಸೇವನೆಯಂಥ ಕಾರಣಗಳಿಗಾಗಿಯೂ ಸಿಟ್ಟು ಹುಟ್ಟುಹಾಕಲಾಗಿದೆ. ಜತೆಗೆ ಅವರ ಹಿಂದುಳಿದಿರುವಿಕೆ, ವೇಷಭೂಷಣ ಮತ್ತು ನೈರ್ಮಲ್ಯದ ಕಾರಣದಿಂದ ಕೂಡಾ ವ್ಯವಸ್ಥಿತವಾಗಿ ಅವರ ವಿರುದ್ಧದ ಅಭಿಪ್ರಾಯ ಮೂಡಿಸಲಾಗುತ್ತಿದೆ.
ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ, ಅವರು ನಮ್ಮ ನೆರೆಯ ಪ್ರದೇಶದಲ್ಲಿ ಅಥವಾ ಸುತ್ತಮುತ್ತಲ ಪರಿಸರದಲ್ಲಿ ವಾಸಿಸಲು ಯೋಗ್ಯರಲ್ಲ ಎಂಬ ಭಾವನೆ. ವಾಸ್ತವವಾಗಿ ಅಪಾಯ ಇರುವುದು ಇಲ್ಲೇ. ನಮ್ಮ ಸಮಾಜದಲ್ಲಿ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸಲ್ಮಾನರು, ಸಾಮಾನ್ಯವಾದ ಮಾನವೀಯ ಪರಿಗಣನೆಗೂ ಯೋಗ್ಯರಲ್ಲ ಎಂಬ ನಂಬಿಕೆಯನ್ನು ಹುಟ್ಟುಹಾಕುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬಿಜೆಪಿ ಮುಖಂಡ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಕೂಡಾ ಒಮ್ಮೆ, ಮುಸ್ಲಿಮರನ್ನು ಎರಡನೆ ದರ್ಜೆ ನಾಗರಿಕರಾಗಿ ಕಾಣಲಾಗುತ್ತಿದೆ ಎಂಬ ಭಾವನೆ ಹಂಚಿಕೊಂಡಿದ್ದರು.
ಭಾರತ ಪ್ರಗತಿಪರ ಅಥವಾ ಆಧುನಿಕ ದೇಶವಾಗಿ ರೂಪುಗೊಳ್ಳ ಬೇಕಿದ್ದರೆ, ಜನಸಾಮಾನ್ಯರಾದ ನಾವು ಪ್ರಜ್ಞಾಪೂರ್ವಕವಾಗಿ, ಅಲ್ಪಸಂಖ್ಯಾತರ ವಿರುದ್ಧದ ಪೂರ್ವಾಗ್ರಹವನ್ನು ತಡೆಯುವ ನಿಟ್ಟಿನಲ್ಲಿ ಯೋಚಿಸಲು ಇದು ಸುಸಂದರ್ಭವಲ್ಲವೇ? ನಮ್ಮ ಸ್ವಾರ್ಥಕ್ಕಾಗಿ ಬಹುಸಂಖ್ಯಾತರ ಬಡಾವಣೆಗಳನ್ನೇ ನಾವು ಮಾಡಿಕೊಂಡು, ಅಲ್ಪಸಂಖ್ಯಾತರನ್ನು ಕೊಂಪೆಯಲ್ಲೇ ಉಳಿಯುವಂತೆ ಮಾಡುವುದರಿಂದ ನಾವು ಶ್ರೇಷ್ಠರು ಎನಿಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ.
ವಾಸ್ತವವಾಗಿ ಬಹುಸಂಖ್ಯಾತ ಹಿಂದೂಗಳ ಪ್ರಾಬಲ್ಯ ಹೊಂದಿರುವ ವಸತಿ ಸಮುಚ್ಚಯದಲ್ಲಿ ಮುಸ್ಲಿಂ ಕುಟುಂಬವೊಂದು ವಾಸ ಮಾಡಲು ಮುಂದಾಗಿದೆ ಎಂದರೆ, ಅದಕ್ಕಿಂತ ದೊಡ್ಡ ನಂಬಿಕೆಯ ಸಂಕೇತ ಬೇರೆ ಯಾವುದಿದೆ? ಮುಸ್ಲಿಮರು ದಾಂಡಿಯಾದಲ್ಲಿ ಭಾಗವಹಿಸುವುದಕ್ಕಿಂತ ಬೇರೆ ಯಾವ ರೀತಿಯಲ್ಲಿ ಸ್ನೇಹ ಹಾಗೂ ಭ್ರಾತೃತ್ವದ ಸಂಕೇತ ರವಾನಿಸಲು ಸಾಧ್ಯ? ಇದನ್ನು ಸ್ವಾಗತಿಸಬೇಕೇ ಅಥವಾ ತಿರಸ್ಕರಿಸಬೇಕೇ?
ಬಹುಶಃ ಇದನ್ನು ನಮ್ಮ ಸಾಂಸ್ಕೃತಿಕ ಹಾಗೂ ಜೀವನ ವಲಯದ ಮೇಲೆ ಅಲ್ಪಸಂಖ್ಯಾತರ ಆಕ್ರಮಣ ಎಂದು ಪರಿಗಣಿಸದೇ, ಇದನ್ನು ಸಮನ್ವಯದ ಹಾಗೂ ವಿಲೀನ ಪ್ರಕ್ರಿಯೆ ಎಂದು ಪರಿಗಣಿಸಬೇಕು. ನಮ್ಮ ಮನೋಪ್ರವೃತ್ತಿಯನ್ನು ಬದಲಿಸಿಕೊಳ್ಳಬಹುದೇ?
-ಸಲಿಲ್ ದೇಸಾಯಿ ಪುಣೆ ಮೂಲದ ಲೇಖಕ, ಚಿತ್ರ ನಿರ್ಮಾಪಕ
ಕೃಪೆ: Deccan herald
ವಾಸ್ತವವಾಗಿ ಬಹುಸಂಖ್ಯಾತ ಹಿಂದೂಗಳ ಪ್ರಾಬಲ್ಯ ಹೊಂದಿರುವ ವಸತಿ ಸಮುಚ್ಚಯದಲ್ಲಿ ಮುಸ್ಲಿಂ ಕುಟುಂಬವೊಂದು ವಾಸ ಮಾಡಲು ಮುಂದಾಗಿದೆ ಎಂದರೆ, ಅದಕ್ಕಿಂತ ದೊಡ್ಡ ನಂಬಿಕೆಯ ಸಂಕೇತ ಬೇರೆ ಯಾವುದಿದೆ? ಮುಸ್ಲಿಮರು ದಾಂಡಿಯಾದಲ್ಲಿ ಭಾಗವಹಿಸುವುದಕ್ಕಿಂತ ಬೇರೆ ಯಾವ ರೀತಿಯಲ್ಲಿ ಸ್ನೇಹ ಹಾಗೂ ಭ್ರಾತೃತ್ವದ ಸಂಕೇತ ರವಾನಿಸಲು ಸಾಧ್ಯ? ಇದನ್ನು ಸ್ವಾಗತಿಸಬೇಕೇ ಅಥವಾ ತಿರಸ್ಕರಿಸಬೇಕೇ?







