ಕೇರಳ ಉಚ್ಚನ್ಯಾಯಾಲಯದಲ್ಲಿ ದಾಖಲೆಯ ನಾಲ್ಕು ಮಹಿಳಾ ನ್ಯಾಯಾಧೀಶರುಗಳು

ಕ್ಟೋಬರ್ ಐದರಂದು ನ್ಯಾಯಾಧೀಶೆ ವಿ.ಶಿರ್ಸಿಯವರನ್ನು ಕೇರಳ ಉಚ್ಚನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆಯನ್ನಾಗಿ ನೇಮಿಸಲಾಯಿತು, ಇದರಿಂದ ಕೇರಳ ಉಚ್ಚನ್ಯಾಯಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ನ್ಯಾಯಾಧೀಶರುಗಳ ಸಂಖ್ಯೆ ನಾಲ್ಕಕ್ಕೇರಿತು. ನ್ಯಾಯಾಧೀಶೆ ಪಿವಿ ಆಶಾ, ಅನು ಶಿವರಾಮನ್ ಮತ್ತು ನ್ಯಾಯಾಧೀಶೆ ಮೇರಿ ಜೋಸೆಫ್ ಉಳಿದ ಮೂವರು ಮಹಿಳಾ ನ್ಯಾಯಾಧೀಶರುಗಳು. ಶಿರ್ಸಿ ಈ ಮೊದಲು ಪ್ರಿನ್ಸಿಪಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದರೆ ಜೋಸೆಫ್ ಜಿಲ್ಲಾ ನ್ಯಾಯಾಧೀಶೆಯಾಗಿದ್ದವರು, ಇವರು ಉಚ್ಚನ್ಯಾಯಾಲಯ ಪೀಠಕ್ಕೆ ನೇಮಕಗೊಂಡಿದ್ದಾರೆ. ಆಶಾ ಮತ್ತು ಶಿವರಾಮನ್ ಅವರು ಸರಕಾರಿ ನ್ಯಾಯವಾದಿಗಳಾಗಿದ್ದು ಬಾರ್ ಮೂಲಕ ಬಂದವರಾಗಿದ್ದಾರೆ. ಈ ಸೇರ್ಪಡೆಯಿಂದ ಕೇರಳ ಉಚ್ಚ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರ ಶೇಕಡಾವಾರು ಸಂಖ್ಯೆ 10.5ಕ್ಕೆ ತಲುಪುತ್ತದೆ ಆದರೂ ಇತರ ಉಚ್ಚ ನ್ಯಾಯಾಲಯಗಳಿಗೆ ಹೋಲಿಸಿದರೆ(ದಿಲ್ಲಿ ಶೇ5.6, ಪಂಜಾಬ್ ಮತ್ತು ಹರ್ಯಾಣದಲ್ಲಿ ಶೇ.15.6 ಮತ್ತು ಬಾಂಬೆ ಉಚ್ಚನ್ಯಾಯಾಲಯ ಶೇ.12.5) ಕಡಿಮೆಯೆ ಇದೆ.
2014ರಲ್ಲಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ನಾನೊಬ್ಬಳೇ ಮಹಿಳಾ ನ್ಯಾಯಾಧೀಶೆಯಾಗಿದ್ದೆ ಎಂದು ತಿಳಿಸುತ್ತಾರೆ ಆಶಾ. ಸದ್ಯ ಕೆಳಮಟ್ಟದ ನ್ಯಾಯಾಲಯಗಳಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.28.6 ಆಗಿದ್ದು ಮಹಿಳಾ ನ್ಯಾಯಾಧೀಶರ ಸಂಖ್ಯೆ ಭವಿಷ್ಯದಲ್ಲಿ ಹೆಚ್ಚಾಗಬಹುದು ಎಂಬ ಭರವಸೆ ನನಗಿದೆ ಎನ್ನುತ್ತಾರೆ ಆಕೆ.
ಮಹಿಳಾ ನ್ಯಾಯಾಧೀಶರು ಉನ್ನತ ನ್ಯಾಯಾಲಯಗಳಿಗೆ ತಲುಪಲು ಹರಸಾಹಸಪಡುವ ಸ್ಥಿತಿಯಿದ್ದರೆ, ಕೆಲವರಂತೂ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶಿವರಾಮನ್ ಹೇಳುವಂತೆ ಪೀಠದ ಇತರ ನ್ಯಾಯಾಧೀಶರುಗಳಿಗೆ ಹೋಲಿಸಿದರೆ ಬಾರ್‌ನಿಂದ ಬರುವ ಮಹಿಳಾ ನ್ಯಾಯಾಧೀಶರು ಹೆಚ್ಚು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಕೆಳಹಂತದ ನ್ಯಾಯಾಲಯಗಳಲ್ಲಿರುವ ಮಹಿಳಾ ನ್ಯಾಯಾಧೀಶರುಗಳು ಒಂದೊಮ್ಮೆ ಉನ್ನತ ಹಂತದ ನ್ಯಾಯಾಲಯಗಳ ನ್ಯಾಯಾಧೀಶರಾಗುವ ಭರವಸೆಯನ್ನು ಇಟ್ಟುಕೊಳ್ಳಬಹುದು. ಆದರೆ ಬಾರ್ ಹಿನ್ನೆಲೆಯಿಂದ ಬರುವ ಮಹಿಳಾ ನ್ಯಾಯವಾದಿಗಳು ಈ ಅವಕಾಶವನ್ನು ಪಡೆಯಲು ಬಹಳ ದೀರ್ಘಕಾಲ ಕಾಯಬೇಕಾಗುತ್ತದೆ ಎಂದವರು ಹೇಳುತ್ತಾರೆ. ಮಹಿಳೆಯರು ನ್ಯಾಯಿಕ ವೃತ್ತಿಯತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುವ ಅಗತ್ಯವಿದೆ ಎಂದು ಹೇಳುವ ಶಿವರಾಮನ್ ಮಹಿಳಾ ನ್ಯಾಯವಾದಿಗಳು ತಮ್ಮ ಸ್ವಂತ ಕಚೇರಿಯನ್ನು ತೆರೆಯಲು ಆರ್ಥಿಕ ಸಹಾಯ ನೀಡುವ ಮೂಲಕ ಈ ಕಾರ್ಯವನ್ನು ಮಾಡಬಹುದು ಎಂದು ಸೇರಿಸುತ್ತಾರೆ. ಬಹಳಷ್ಟು ಅರ್ಹ ಮಹಿಳೆಯರನ್ನು ವಿವಿಧ ಕಾರಣಗಳಿಂದಾಗಿ ನ್ಯಾಯಾಧೀಶರುಗಳನ್ನಾಗಿ ನೇಮಕ ಮಾಡುವಲ್ಲಿ ನಿರ್ಲಕ್ಷಿಸಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸರಿಯಾದ ಅವಕಾಶವನ್ನು ಒದಗಿಸುವ ಮೂಲಕ ಮಹಿಳಾ ನ್ಯಾಯಧೀಶರುಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂಬುದು ನನ್ನ ಅನಿಸಿಕೆ ಎಂದು ಶಿವರಾಮನ್ ಹೇಳುತ್ತಾರೆ. ಸಮಾನ ಅವಕಾಶ
ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ನೇಮಕಗೊಂಡ ಮಹಿಳಾ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಯ ನಿವೃತ್ತ ನ್ಯಾಯಾಧೀಶೆ ಫಾತಿಮಾ ಬೀವಿ ತಾನು ಉನ್ನತ ನ್ಯಾಯವ್ಯವಸ್ಥೆಯಲ್ಲಿ ಹೆಚ್ಚು ಮಹಿಳೆಯರನ್ನು ನೋಡಲು ಬಯಸುತ್ತೇನೆ ಎಂದು ಹೇಳುತ್ತಾರೆ. ಕೇರಳ ಉಚ್ಚ ನ್ಯಾಯಾಲಯದಲ್ಲಿ ಈಗ ನಾಲ್ಕು ಮಹಿಳಾ ನ್ಯಾಯಾಧೀಶರುಗಳಿದ್ದಾರೆ ಎಂಬುದು ಉತ್ತಮ ಬೆಳವಣಿಗೆ ಆದರೆ ಇದು ಅಷ್ಟು ದೊಡ್ಡ ಸಂಖ್ಯೆಯಲ್ಲ ಎಂಬುದು ನನ್ನ ಅನಿಸಿಕೆ ಎಂದವರು ಹೇಳುತ್ತಾರೆ. ಸರ್ವೋಚ್ಚ ನ್ಯಾಯಾಲಯ ಇನ್ನೂ ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದಾಕೆ ತಿಳಿಸುತ್ತಾರೆ. ರಾಜ್ಯದಲ್ಲಿ ಅರ್ಹ ಮಹಿಳಾ ನ್ಯಾಯವಾದಿಗಳಿಗೇನೂ ಕೊರತೆಯಿಲ್ಲ ಎಂಬ ಆಶಾ ಅವರ ಮಾತನ್ನು ಬೀವಿ ಒಪ್ಪುತ್ತಾರೆ. ಆಯ್ಕೆ ಸಮಿತಿಯು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಕೇವಲ ಅರ್ಹತೆಯತ್ತ ಮಾತ್ರ ಗಮನಹರಿಸಬೇಕು ಎಂದು ಬೀವಿ ತಿಳಿಸುತ್ತಾರೆ. ಹೆಚ್ಚು ಮಹಿಳೆಯರು ನ್ಯಾಯಿಕ ವೃತ್ತಿಯನ್ನು ಆರಿಸಬೇಕು ಎಂದು ನಾವು ಬಯಸುವುದಾದರೆ ನ್ಯಾಯಾಧೀಶರುಗಳ ಆಯ್ಕೆಯ ಸಮಯದಲ್ಲಿ ಅವರು ಭೇದಭಾವ ಎದುರಿಸಬಾರದು ಎಂದವರು ಹೇಳುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಮಹಿಳಾ ನ್ಯಾಯವಾದಿಗಳ ಸಂಘ ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಿಳಾ ಪ್ರಾತಿನಿಧ್ಯ ವಿಷಯವನ್ನು ಎತ್ತಿದೆ. ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರ ಸಮಿತಿಯು ಸರ್ವೋಚ್ಚ ನ್ಯಾಯಲಯಕ್ಕೆ ನ್ಯಾಯಾಧೀಶರ ಹೆಸರನ್ನು ಸೂಚಿಸುವಾಗ ತೋರಿಸುವ ಲಿಂಗ ತಾರತಮ್ಯವನ್ನು ನಿಲ್ಲಿಸಬೇಕು ಎಂದು ಸಂಘವು ಹೇಳಿಕೊಂಡಿದೆ. ಇಡೀ ದೇಶದಲ್ಲಿ ಉಚ್ಚ ನ್ಯಾಯಾಲಯಗಳಲ್ಲಿರುವ 611 ಪುರುಷ ನ್ಯಾಯಾಧೀಶರುಗಳಿಗೆ ಹೋಲಿಸಿದರೆ ಕೇವಲ 62 ಮಹಿಳಾ ನ್ಯಾಯಾಧೀಶರುಗಳಿದ್ದಾರೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೇರಣ ಕುಮಾರಿ ತಿಳಿಸುತ್ತಾರೆ. ಕಳೆದ ವರ್ಷದ ಕೊನೆಯಲ್ಲಿ ಪ್ರಕಟವಾದ ಮಾಧ್ಯಮ ವರದಿಯೊಂದರಲ್ಲಿ 24 ರಾಜ್ಯ ಉಚ್ಚ ನ್ಯಾಯಾಲಯಗಳ ಪೈಕಿ ಒಂಬತ್ತರಲ್ಲಿ ಒಂದೇ ಒಂದು ಮಹಿಳಾ ನ್ಯಾಯಾಧೀಶರು ಕೂಡಾ ಇಲ್ಲ ಮತ್ತು ಮೂರರಲ್ಲಿ ತಲಾ ಒಂದು ಮಹಿಳಾ ನ್ಯಾಯಾಧೀಶರಿದ್ದಾರೆ. ಇನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ 29 ನ್ಯಾಯಾಧೀಶರುಗಳ ಪೈಕಿ ಆರ್.ಬಾನುಮತಿ ಮಾತ್ರ ಏಕಾಂಗಿ ಮಹಿಳಾ ನ್ಯಾಯಾಧೀಶರಾಗಿದ್ದಾರೆ ಎಂದು ವರದಿ ತಿಳಿಸುತ್ತದೆ. ಕೇರಳ ಉಚ್ಚ ನ್ಯಾಯಾಲಯದಿಂದ ಪ್ರೇರಣೆ ಪಡೆದು ಇತರ ರಾಜ್ಯಗಳು ಕೂಡಾ ಉಚ್ಚ ನ್ಯಾಯಾಲಯಗಳಿಗೆ ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಬಹುದು ಎಂದು ಕುಮಾರಿ ಭರವಸೆ ವ್ಯಕ್ತಪಡಿಸುತ್ತಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರ ಪ್ರಾತಿನಿಧ್ಯ ಹೊಂದಬೇಕು. ಮತ್ತು ನ್ಯಾಯಾಧೀಶರನ್ನು ಆಯ್ಕೆ ಮಾಡುವಾಗ ಪೀಠ ಮತ್ತು ಬಾರ್ ಮಧ್ಯೆ ಸಮತೋಲನ ಇರಬೇಕು ಎಂದಾಕೆ ಹೇಳುತ್ತಾರೆ. ಕೆಳ ಮತ್ತು ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ನ್ಯಾಯವಾದಿಗಳ ಸಂಖ್ಯೆ ಹೆಚ್ಚಾಗಿರುವುದರತ್ತ ಮತ್ತು ಅವರಲ್ಲಿ ಬಹಳಷ್ಟು ನ್ಯಾಯವಾದಿಗಳು ಕೇಂದ್ರ ನ್ಯಾಯಿಕ ಪೀಠದ ಜೊತೆಗಿರುವುದರತ್ತ ಬೊಟ್ಟು ಮಾಡುವ ಕುಮಾರಿ ಮುಂದಿನ ದಿನಗಳಲ್ಲಿ ಮಹಿಳಾ ನ್ಯಾಯಾಧೀಶರುಗಳ ಸಂಖ್ಯೆಯೂ ವೃದ್ಧಿಯಾಗಬಹುದು ಎಂದು ನಂಬುತ್ತಾರೆ.
ಕೇರಳಉಚ್ಚನ್ಯಾಯಾಲಯದಲ್ಲಿ ಈಗ ನಾಲ್ಕು ಮಹಿಳಾ ನ್ಯಾಯಾಧೀಶರುಗಳಿದ್ದಾರೆ ಎಂಬುದು ಉತ್ತಮ ಬೆಳವಣಿಗೆ. ಆದರೆ ಇದು ಅಷ್ಟು ದೊಡ್ಡ ಸಂಖ್ಯೆಯಲ್ಲ. ಸರ್ವೋಚ್ಚ ನ್ಯಾಯಾಲಯ ಇನ್ನೂ ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಮಹಿಳಾ ನ್ಯಾಯಾಧೀಶೆಯಾದ ಫಾತಿಮಾ ಬೀವಿ(ನಿವೃತ್ತ ನ್ಯಾಯಾಧೀಶೆ) ಹೇಳುತ್ತಾರೆ.







