‘ಎಂಆರ್‌ಪಿಎಲ್ ರಸ್ತೆ ಶೀಘ್ರ ದುರಸ್ತಿ’
ಸುರತ್ಕಲ್, ಅ.23: ಸುರತ್ಕಲ್, ಕಾನ-ಎಂಆರ್‌ಪಿಎಲ್ ರಸ್ತೆಯ ದುರಸ್ತಿ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ಮೊಯ್ದಿನ್ ಬಾವ ಹೇಳಿದರು.
ಸುರತ್ಕಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಮತ್ತು ಬೃಹತ್ ಉದ್ದಿಮೆಗಳ ನೆರವಿನಿಂದ 1.50 ಲಕ್ಷ ರೂ. ವೆಚ್ಚದಲ್ಲಿ ಸುರತ್ಕಲ್- ಕಾನ ಎಂಆರ್‌ಪಿಎಲ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ.
ಸುರತ್ಕಲ್‌ನಿಂದ ರೈಲುನಿಲ್ದಾಣದವರೆಗೆ 2.75 ಕೋ. ರೂ. ವೆಚ್ಚದಲ್ಲಿ ವಿಸ್ತರಣೆ ಯೋಜನೆಗೆ ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸುರತ್ಕಲ್‌ನಿಂದ ಬಜ್ಪೆ ವಿಮಾನ ನಿಲ್ದಾಣದವರೆಗಿನ ರಸ್ತೆ ಕಾಮಗಾರಿ ಯೋಜನೆಗೆ ಸರಕಾರ ಹಣ ಮೀಸಲಿಟ್ಟಿದೆ ಎಂದರು.
ಸುರತ್ಕಲ್ ನಿಂದ ಎಂಆರ್‌ಪಿಎಲ್‌ಗೆ ಹೋಗುವ ಬೃಹತ್ ಉದ್ಯಮಗಳ ವಾಹನಗಳಿಗೆ ಟೋಲ್ ನೀಡುವ ಪ್ರಸ್ತಾವಕ್ಕೆ ಉದ್ದಿಮೆಗಳು ಸಮ್ಮತಿ ಸೂಚಿಸಿದೆ. ಇದಕ್ಕಾಗಿ ವಾಹನಗಳ ಗಣತಿ ಆರಂಭವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಗುಣಶೇಖರ ಶೆಟ್ಟಿ, ಪಿ. ಬಶೀರ್ ಅಹ್ಮದ್, ಅಶೋಕ್ ಶೆಟ್ಟಿ ಮತ್ತಿತರರಿದ್ದರು.





