‘ಚಲೋ ಉಡುಪಿ’ಯ ಆಹಾರದ ಆಯ್ಕೆಗೆ ಸಹಮತವಿಲ್ಲ: ಪೇಜಾವರ ಶ್ರೀ
ಉಡುಪಿ, ಅ.23: ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ಮಾಡಿರುವ ‘ಚಲೋ ಉಡುಪಿ’ಯಲ್ಲಿ ಭೂಮಿಯ ಹಕ್ಕಿಗೆ ನನ್ನ ಸಹಮತವಿದೆ. ಆದರೆ ‘ಆಹಾರ ನಮ್ಮ ಆಯ್ಕೆ’ ಎಂದು ಹೇಳಿ ಗೋಭಕ್ಷಣೆ ಹಕ್ಕು ಕೇಳಬಾರದು. ಇದಕ್ಕೆ ನನ್ನ ಸಹಮತವಿಲ್ಲ.
ಕುಡಿಯುವುದು ನಮ್ಮ ಹಕ್ಕು ಹೇಳಿ ಮದ್ಯ ಸೇವಿಸುವುದು ಹೇಗೆ ಸರಿಯಲ್ಲವೋ ಹಾಗೆ ಗೋಭಕ್ಷಣೆ ಕೂಡ ಸರಿಯಲ್ಲ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಯುವ ಬ್ರಿಗೇಡ್ ವತಿಯಿಂದ ರವಿವಾರ ಸಂಜೆ ರಾಜಾಂಗಣದಲ್ಲಿ ಜರಗಿದ ‘ಕನಕ ನಡೆ’ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ಚಲೋ ಉಡುಪಿ’ಯಲ್ಲಿ ಅನಗತ್ಯವಾಗಿ ಶ್ರೀಕೃಷ್ಣ ಮಠವನ್ನು ಎಳೆದು ತರಲಾಗಿದೆ. ಇದು ಮಠದ ಮೇಲೆ ಮಾಡಿರುವ ದಾಳಿಯಲ್ಲ. ಇಡೀ ಹಿಂದೂ ಸಮಾಜದ ಮೇಲೆ ಮಾಡಿರುವ ಆಕ್ರಮಣವಾಗಿದೆ. ಇದನ್ನು ಎದುರಿಸಲು ನಾಡಿನ ವಿವಿಧೆಡೆಯಿಂದ ಆಗಮಿಸಿ ನಮಗೆ ಧೈರ್ಯ ತುಂಬಿದ್ದಾರೆ. ಇದು ಕನಕನ ಭಕ್ತಿಯ ನಡೆಯ ಮಾತ್ರವಲ್ಲ ಎಲ್ಲ ಜಾತಿಯವರು ಒಂದುಗೂಡಿ ಸಾಗಿದ ಸಮಾನತೆಯ ನಡೆ ಎಂದು ಅವರು ತಿಳಿಸಿದರು.
ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ‘ಕನಕ ನಡೆ’ಯನ್ನು ಪರೋಕ್ಷವಾಗಿ ಸರ್ಜಿಕಲ್ ದಾಳಿಗೆ ಹೋಲಿಕೆ ಮಾಡಿ ಮಾತನಾಡಿ, ಮೊದಲು ವಿರೋಧಿಗಳು ದಾಳಿ ನಡೆಸಿದರು. ನಂತರ ನಾವು ಚೌಕಟ್ಟನ್ನು ಮೀರದೆ ಪ್ರತಿ ದಾಳಿ ಮಾಡಿದ್ದೇವೆ ಎಂದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬಳ್ಳಾರಿ ಹಿರೆಹಡಗಲಿ ಅಭಿನವ ಹಾಲು ಸಮಾಜ ಸಂಸ್ಥಾನ ಮಠದ ಶ್ರೀಅಭಿನವ ಹಾಲ ಸ್ವಾಮೀಜಿ, ಹಂಪಿ ಮಾತಂಗ ಪವರ್ತ ಆಶ್ರಮದ ಶ್ರೀಪೂರ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಯುವ ಬ್ರಿಗೇಡ್ ನಿತ್ಯಾನಂದ ಉಪಸ್ಥಿತರಿದ್ದರು. ವಾಸುದೇವ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







