ಪ್ರಥಮ ಟೆಸ್ಟ್: ಕುತೂಹಲ ಕೆರಳಿಸಿದ ಬಾಂಗ್ಲಾ-ಇಂಗ್ಲೆಂಡ್ ಪಂದ್ಯ

ಚಿತ್ತಗಾಂಗ್, ಅ.23: ಆತಿಥೇಯ ಬಾಂಗ್ಲಾದೇಶ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯ ಕುತೂಹಲ ಘಟ್ಟದಲ್ಲಿದ್ದು, ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
ನಾಲ್ಕನೆ ದಿನದಾಟವಾದ ರವಿವಾರ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 286 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ದಿನದಾಟದಂತ್ಯಕ್ಕೆ 8 ವಿಕೆಟ್‌ಗಳ ನಷ್ಟಕ್ಕೆ 253 ರನ್ ಗಳಿಸಿದೆ. ಗೆಲ್ಲಲು ಕೊನೆಯ ದಿನವಾದ ಸೋಮವಾರ ಉಳಿದೆರಡು ವಿಕೆಟ್‌ಗಳ ನೆರವಿನಿಂದ ಕೇವಲ 33 ರನ್ ಗಳಿಸಬೇಕಾಗಿದೆ.
ಅಜೇಯ ಅರ್ಧಶತಕ ಬಾರಿಸಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಬ್ಬೀರ್ರಹ್ಮಾನ್(59) ಹಾಗೂ ತೈಜುಲ್ ಅಸ್ಲಾಮ್(11) ಕ್ರೀಸ್ ಕಾಯ್ದುಕೊಂಡಿದ್ದಾರೆ. ಚೊಚ್ಚಲ ಅರ್ಧಶತಕ ಬಾರಿಸಿರುವ ಶಬ್ಬೀರ್ರಹ್ಮಾನ್ ಬಾಂಗ್ಲಾದೇಶಕ್ಕೆ ಗೆಲುವಿನ ಭರವಸೆ ಮೂಡಿಸಿದ್ದಾರೆ.
ಮತ್ತೊಂದೆಡೆ, ಇಂಗ್ಲೆಂಡ್ ತಂಡ ಶಬ್ಬೀರ್ರಹ್ಮಾನ್ ಸಹಿತ ಇನ್ನೆರಡು ವಿಕೆಟ್ ಕಬಳಿಸಿದರೆ ಮೊದಲ ಪಂದ್ಯವನ್ನು ಗೆದ್ದುಕೊಳ್ಳಲಿದೆ.
ಇದಕ್ಕೆ ಮೊದಲು 8 ವಿಕೆಟ್ ನಷ್ಟಕ್ಕೆ 228 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಕೇವಲ 240 ರನ್‌ಗೆ ಆಲೌಟಾಯಿತು. ಆಲ್‌ರೌಂಡರ್ ಶಾಕಿಬ್ ಅಲ್ ಹಸನ್(5-85) ಐದು ವಿಕೆಟ್‌ಗಳನ್ನ ಉಡಾಯಿಸಿ ಗಮನ ಸೆಳೆದರು. ಸ್ಟೋಕ್ಸ್(85) ತಂಡದ ಮೊತ್ತವನ್ನು 240ಕ್ಕೆ ತಲುಪಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 293 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 248 ರನ್‌ಗೆ ಆಲೌಟಾಗಿ ಆಂಗ್ಲರಿಗೆ 45 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು.
ಗೆಲ್ಲಲು ಕಠಿಣ ಸವಾಲು ಪಡೆದಿರುವ ಬಾಂಗ್ಲಾದೇಶ ಶಬ್ಬೀರ್ರಹ್ಮಾನ್(59), ಇಮ್ರುಲ್ ಕಯೆಸ್(43), ಮುಶ್ಫ್ಫಿಕುರ್ರಹೀಂ(39) ನೆರವಿನಿಂದ ಗೆಲುವಿನ ಹೊಸ್ತಿಲಿಗೆ ತಲುಪಿದೆ. ಗೆಲುವಿನ ದಡ ಸೇರಲು ಯಶಸ್ವಿಯಾಗುವುದೇ ಎನ್ನುವುದು ಸೋಮವಾರ ಗೊತ್ತಾಗಲಿದೆ.







