ನ್ಯಾಯಾಲಯದಲ್ಲಿ ತಲಾಖ್: ನ್ಯಾಯೋಚಿತವೇ?
ಮಾನ್ಯರೆ,
ಈ ದೇಶ ತನ್ನ ಮುಖ್ಯ ಸಮಸ್ಯೆಗಳನ್ನು ಬದಿಗಿಟ್ಟು, ಜನರಲ್ಲಿ ಪ್ರಚೋದನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ದಿಕ್ಕು ತಪ್ಪಿಸುತ್ತಿದೆ. ಒಂದೆಡೆ ಇಡೀ ದೇಶವನ್ನು ಬೃಹತ್ ಕಂಪೆನಿಗಳು, ಅಂಬಾನಿ ಅದಾನಿಗಳು ದೋಚುತ್ತಿರುವಾಗ ನಮ್ಮ ಗಮನ ಅತ್ತ ಹರಿಯಬಾರದು ಎನ್ನುವ ಕಾರಣಕ್ಕಾಗಿಯೇ ಸಮಾನ ನಾಗರಿಕ ಸಂಹಿತೆಯನ್ನು ಮುಂದಿಟ್ಟಿದೆ. ತ್ರಿವಳಿ ತಲಾಖ್‌ನ ಬಗ್ಗೆ ಸರಕಾರ ತೀವ್ರ ಕಾಳಜಿಯನ್ನು ವ್ಯಕ್ತಪಡಿಸುತ್ತಿದೆ. ಸರಿ. ಅದಕ್ಕೆ ಪರ್ಯಾಯ ಸರಕಾರದ ಬಳಿ ಏನಿದೆ? ಸಮಾನ ನಾಗರಿಕ ಸಂಹಿತೆ ಎಂದು ಅದು ಹೇಳುತ್ತಿದೆ. ಇಂದು ನ್ಯಾಯಾಲಯ ವಿಚ್ಛೇದನಗಳನ್ನು ಇತ್ಯರ್ಥಪಡಿಸುವಲ್ಲಿ ಏದುಸಿರು ಬಿಡುತ್ತಿದೆ. ದೇಶದ ನ್ಯಾಯಾಲಯದಲ್ಲಿ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೆ ಕೊಳೆಯುತ್ತಿವೆ. ಪತ್ನಿಯ ಮೇಲೆ ಸೇಡು ತೀರಿಸುವುದಕ್ಕಾಗಿಯೇ ಪತಿ, ಪ್ರಕರಣವನ್ನು ನ್ಯಾಯಾಲಯದಲ್ಲಿ ಉದ್ದಕ್ಕೆ ಎಳೆಯುವ ಉದಾಹರಣೆಗಳಿವೆ. ಮುಂಬೈಯಲ್ಲಿ ಒಂದು ಪ್ರಕರಣ ಸುಮಾರು 9 ವರ್ಷ ಕಳೆದಿದೆಯಾದರೂ ಇಬ್ಬರಿಗೂ ವಿಚ್ಛೇದನ ಸಿಕ್ಕಿಲ್ಲ. ಮಹಿಳೆ ವಿಚ್ಛೇದನಾ ಅಥವಾ ತಲಾಖ್‌ಗಾಗಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಪತಿಯಿಂದ ಆಕ್ಷೇಪ. ಒಟ್ಟಿನಲ್ಲಿ ಇಬ್ಬರೂ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ ಆದರೆ ವಿಚ್ಛೇದನವಿಲ್ಲ. ಆಕೆಗೆ ಬೇರೆ ಮದುವೆಯಾಗುವುದಕ್ಕೂ ಸಾಧ್ಯವಿಲ್ಲದಂತಹ ಸ್ಥಿತಿ. ಜೊತೆಗೆ ಮಗು ಯಾರ ಜೊತೆಗೆ ಎನ್ನುವುದು ಇತ್ಯರ್ಥವಾಗದೆ ತಂದೆತಾಯಿಗಳ ಪ್ರೀತಿಯಿಂದ ವಂಚಿತವಾಗಿದೆ. ಸ್ವತಃ ನ್ಯಾಯಾಲಯವೇ ತೀರ್ಪು ನೀಡುತ್ತಾ ‘ವಿಚ್ಛೇದನಕ್ಕೆ ಒಂದು ಕಾಲಬದ್ಧತೆ ಬೇಕು’ ಎಂದು ಹೇಳಿದೆ. ಅಂದರೆ ತಲಾಖ್ ವಿಷಯದಲ್ಲಿ ನಮ್ಮ ನ್ಯಾಯಾಲಯವೂ ಹಲವು ಕಡೆ ಎಡವಿದೆ. ಮುಸ್ಲಿಮರ ತಲಾಖ್ ನ್ಯಾಯಾಲಯದ ಮೂಲಕ ಇತ್ಯರ್ಥ ಮಾಡಬೇಕು ಎಂದು ಹೇಳುವುದಾದರೆ, ‘ಪ್ರಕರಣಗಳನ್ನು ಆದಷ್ಟೂ ನ್ಯಾಯಾಲಯದ ಹೊರಗೆ ಇತ್ಯರ್ಥ ಪಡಿಸಿ’ ಎಂದು ನ್ಯಾಯಾಧೀಶರು ನೀಡುವ ಕರೆಗೆ ಅರ್ಥವೇನಿದೆ? ತಲಾಖ್ ವಿಷಯದಲ್ಲಿ ಭಿನ್ನಮತಗಳಿದ್ದರೆ ಅದನ್ನು ಆಯಾ ಕುಟುಂಬ, ಸಮಾಜ, ಸಮುದಾಯವೇ ಜೊತೆಕೂತು ಇತ್ಯರ್ಥ ಪಡಿಸುವುದು ಎಲ್ಲರಿಗೂ ಒಳಿತಾಗಿದೆ. -ಶಬೀನಾ





