ಲಕ್ಷಾಂತರ ವೌಲ್ಯದ ಅಕ್ರಮ ಮರ ಶೇಖರಣೆ: ಓರ್ವನ ಬಂಧನ

ಬೆಳ್ತಂಗಡಿ, ಅ.23: ತಾಲೂಕಿನ ಶಿಬಾಜೆ ಗ್ರಾಮದ ನಿರಾಣ - ನಿರ್ಮುಡೆ ರಸ್ತೆಯ ಪೊಸೋಡಿ ಬಂಗೇರಡ್ಕ ಎಂಬಲ್ಲಿ ಸರಕಾರಿ ಸ್ಥಳದಲ್ಲಿದ್ದ ಬೀಟೆ ಜಾತಿಯ ಹಾಗೂ ಇತರೆ 7ಲಕ್ಷ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಹಲಗೆಗಳನ್ನಾಗಿ ಮಾಡಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಂಗಳೂರು ಅರಣ್ಯ ಸಂಚಾರ ದಳದ ಡಿಎಫ್‌ಒ ಸದಾಶಿವ ಭಟ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮರಗಳನ್ನು ವಶಪಡಿಸಿಕೊಂಡು, ಆರೋಪಿ ಅಣ್ಣು ಎಂಬಾತನನ್ನು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯೇ ಈ ಸ್ಥಳದಲ್ಲಿ ದೊಡ್ಡ ಗಾತ್ರದ ಬೀಟೆ, ಹಲಸು, ಬೇಂಗ ಮುಂತಾದ ಜಾತಿಯ ಮರಗಳನ್ನು ಕಡಿದು ಹಾಕಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡ ಲಾಗಿತ್ತು. ಶನಿವಾರ ರಾತ್ರಿ ಮರಗಳನ್ನು ಸಾಗಾಟ ಮಾಡುವ ತಯಾ ರಿಯೂ ನಡೆದಿತ್ತು ಎನ್ನಲಾಗಿದೆ.
ಶನಿವಾರ ಸಂಜೆ ಪ್ರಕರಣದ ಸ್ಥಳಕ್ಕೆ ಹೋದ ಅರಣ್ಯಾಧಿಕಾರಿಗಳನ್ನು ಅಲ್ಲಿಗೆ ಬರದಂತೆ ಆರೋಪಿ ಹಾಗೂ ಇತರರು ತಡೆದಿದ್ದರು ಎನ್ನಲಾಗಿದೆ. ರವಿವಾರ ಧರ್ಮಸ್ಥಳ ಪೊಲೀಸರ ನೆರವಿನೊಂದಿಗೆ ಅರಣ್ಯಾಧಿಕಾರಿಗಳು ಧಾಳಿ ನಡೆಸಿ ಸ್ಥಳದಲ್ಲಿ ಸಾಗಾಟಕ್ಕೆ ತಯಾರಿಸಿಡಲಾಗಿದ್ದ ಅಂದಾಜು 7 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ 36 ಬೀಟೆ, 36 ಬೇಂಗ, ಹಲಸು ಮತ್ತು ಇನ್ನಿತರ ಜಾತಿಯ ಮರಗಳೂ ಸೇರಿದಂತೆ ಅಂದಾಜು 111 ಹಲಗೆಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಕಾರ್ಯಾಚರಣೆಯಲ್ಲಿ ಸಂಚಾರ ದಳದ ಅಧಿಕಾರಿಗಳಾದ ಬಾಲಕೃಷ್ಣ ಆಚಾರ್, ಎಸ್. ವಿನೋದ್ ಗೌಡ, ಅಶ್ವಿತ್ ಗಟ್ಟಿ, ಪ್ರಮೋದ್, ಸೀತಾರಾಮ್, ಸಂದೀಪ್ ಸಿ.ಕೆ., ಪ್ರಶಾಂತ್, ಸ್ಥಳೀಯ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಸಂಧ್ಯಾ, ಅರಣ್ಯಾಧಿಕಾರಿಗಳಾದ ಪ್ರಶಾಂತ್, ಜಯಕುಮಾರ್, ಸಿಬ್ಬಂದಿ ಭಾಗ ವಹಿಸಿದ್ದರು.
ಈ ಪ್ರಕರಣದಲ್ಲಿ ಬಂಧಿಸಲಾದ ವ್ಯಕ್ತಿ ಪಿಡಬ್ಲುಡಿ ಇಲಾಖೆಯಲ್ಲಿ ಚಾಲಕನಾಗಿ ಸರಕಾರಿ ನೌಕರನಾಗಿರು ವುದಾಗಿ ತಿಳಿದು ಬಂದಿದೆ. ಕಳೆದ ಹಲವು ಸಮಯಗಳಿಂದಲೂ ಶಿಬಾಜೆ ಗ್ರಾಮದಲ್ಲಿ ನಿರಂತರವಾಗಿ ರಕ್ಷಿತಾರಣ್ಯ ಮತ್ತು ಸರಕಾರಿ ಸ್ಥಳಗಳಲ್ಲಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ವಲಯಕ್ಕೆ ಸೇರಿದ ಅರಣ್ಯ ಪ್ರದೇಶಗಳಾದ ಶಿಬಾಜೆ, ಶಿರಾಡಿ, ಶಿಶಿಲ ಮತ್ತು ಕಳೆಂಜ ಭಾಗಗಳಲ್ಲಿ ನಿರಂತರವಾಗಿ ರಕ್ಷಿತಾರಣ್ಯದ ಒಳಗಿನಿಂದಲೇ ಮರಗಳು ರಾಜಾರೋಷವಾಗಿ ಸಾಗಾಟವಾಗುತ್ತಿದೆ.
ಆದರೂ ಉಪ್ಪಿನಂಗಡಿ ವಲಯದ ಯಾವುದೇ ಅರಣ್ಯಾಧಿಕಾರಿಗಳು ಸರಿಯಾದ ಕ್ರಮವನ್ನೇ ಕೈಗೊಳ್ಳದಿರುವ ಬಗ್ಗೆ ಬಲವಾದ ಆರೋಪಗಳು ಕಳೆದ ವಾರ ನಡೆದ ಶಿಬಾಜೆ ಗ್ರಾಮ ಸಭೆಯಲ್ಲಿ ಕೇಳಿ ಬಂದಿತ್ತು. ಇದೀಗ ಸಂಚಾರಿ ದಳದ ಸಮರ್ಪಕ ಕಾರ್ಯನಿರ್ವಹಣೆಯಿಂ ಭಾರೀ ಪ್ರಮಾಣದ ಅಕ್ರಮ ಮರ ಸಾಗಾಟ ಪ್ರಕರಣ ಬೆಳಕಿಗೆ ಬಂದಂತಾಗಿದೆ.







