ಯುವಬ್ರಿಗೇಡ್ ವಿರುದ್ಧ ಕ್ರಮಕೈಗೊಳ್ಳಲು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಗ್ರಹ
ಮಂಗಳೂರು, ಅ.24: ಕನಕನಡೆ ಕಾರ್ಯಕ್ರಮಕ್ಕೆ ಮಠದ ಹೊರಗಾಗಲೀ, ಒಳಗಾಗಲೀ ಜಿಲ್ಲಾಡಳಿತ ಸ್ಪಷ್ಟವಾಗಿ ಅನುಮತಿ ನಿರಾಕರಿಸಿದ್ದರೂ ಯುವಬ್ರಿಗೇಡ್ ಕನಕನಡೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಅ.9 ರಂದು ಉಡುಪಿಯಲ್ಲಿ ನಡೆಸಿದ ಬೃಹತ್ ಸ್ವಾಭಿಮಾನಿ ಸಂಘರ್ಷ ಸಮಾವೇಶವನ್ನು ಅವಮಾನಿಸಿ ಯುವಬ್ರಿಗೇಡ್ ನ ಮುಖಂಡರು ದಲಿತ ದಮನಿತರು ನಡೆಸಿದ ರ್ಯಾಲಿ ಹಾಗೂ ಈ ಸಮಾವೇಶದಿಂದ ಉಡುಪಿ ಮಲಿನಗೊಂಡಿದೆ, ಸ್ವಚ್ಛಗೊಳಿಸೋಣ ಬನ್ನಿ ಎಂದು ಸಂಘಟಿತ ಅಸ್ಪೃಷ್ಯತೆ ಆಚರಣೆಗೆ ಕರೆ ನೀಡಿದ್ದರು. ನಂತರ ದಲಿತರು ಹಿಂದುಳಿದ ವರ್ಗದ ಜನರು ಹಾಗೂ ಪ್ರಗತಿಪರರು ನಡೆದ ದಾರಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಘೋಷಿಸಿತ್ತು. ಇದಕ್ಕೆ ಆರಂಭದಲ್ಲಿ ತೀವ್ರ ವಿರೋಧ ಬಂದ ಹಿನ್ನಲೆಯಲ್ಲಿ ಅದನ್ನು ಕನಕ ನಡೆ ಎಂದು ಹೆಸರು ಬದಲಿಸಲಾಗಿತ್ತು. ಕನಕರ ಹೆಸರಿಗೆ ಅಪಮಾನ ಮಾಡುವ ಕಾರ್ಯಕ್ರಮ ಇದು ಎಂದು ಅದಕ್ಕೂ ವಿರೋಧ ಬಂದಾಗ ರಥಬೀದಿಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿದರು. ಇದಕ್ಕೂ ಜಿಲ್ಲಾಡಳಿತ ನಿಷೇಧ ಹೇರಿದ್ದರಿಂದಾಗಿ ಮಠದ ಆವರಣದೊಳಗೆ ಸಾಂಕೇತಿಕವಾಗಿಯೇ ಕೇವಲ ಬೆರಳೆಣಿಕೆಯಷ್ಟು ಮಂದಿ ಸ್ವಚ್ಛ ಮಾಡುವ ಮೂಲಕವೇ ಸಂಘಟಿತ ಮತ್ತು ಘೋಷಿತ ಅಸ್ಪೃಷ್ಯತೆಯನ್ನು ಆಚರಿಸಿದ್ದಾರೆ.
ಯುವ ಬ್ರಿಗೇಡ್‍ನ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಹಸ್ರಾರು ಜನ ದಲಿತರು, ಹಿಂದುಳಿದವರು, ಮಠಾಧಿಪತಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಭಾಗವಹಿಸುತ್ತಾರೆಂದು ಭಾರೀ ಪ್ರಚಾರ ನಡೆಸಲಾಗಿತ್ತು. ಆದರೆ ಜನಸಾಮಾನ್ಯರ ಧಾರ್ಮಿಕ ಹಾಗೂ ಭಾವನಾತ್ಮಕ ವಿಷಯಗಳನ್ನು ತಮ್ಮ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುವ ಈ ಕಾರ್ಯಕ್ರಮವನ್ನು ನಾಡಿನ ದಲಿತರು ಮತ್ತು ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು, ಮಠಾಧಿಪತಿಗಳು ಹಾಗೂ ಪ್ರಜ್ಞಾವಂತ ಬ್ರಾಹ್ಮಣರೂ ಸಹ ಧಿಕ್ಕರಿಸಿರುವ ಮೂಲಕ ದಲಿತ ದಮನಿತರ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಯುವಬ್ರಿಗೇಡ್ ಮಾಡಲು ಹೊರಟಿದ್ದಂತಹ ಸಂಘಟಿತ ಘೋಷಿತ ಅಸ್ಪøಶ್ಯತಾಚರಣೆಗೆ ತಮ್ಮ ಬೆಂಬಲ ಇಲ್ಲ ಎಂಬ ಸಂದೇಶವನ್ನು ಇಂದು ಸ್ಪಷ್ಟವಾಗಿ ನೀಡಿದ್ದಾರೆ.
ಚಲೋ ಉಡುಪಿ ಸ್ವಾಭಿಮಾನಿ ಸಂಘರ್ಷ ಸಮಾವೇಶವು ದಲಿತ ಮತ್ತು ಹಿಂದುಳಿದ ವರ್ಗಗಳ ಯುವಜನತೆಗೆ ಈ ಸಂಘಪರಿವಾರಗಳ ಪಾಪದ ಕೂಪದಿಂದ ಹೊರಬರುವಂತೆ ಕರೆ ನೀಡಿತ್ತು. ಈ ಕರೆಗೆ ಪೂರಕವಾಗಿ ಇಂದು ಯುವಬ್ರಿಗೇಡ್‍ನ ಮಾನವವಿರೋಧಿ ಕಾರ್ಯಕ್ರಮದಿಂದ ದಲಿತ- ಹಿಂದುಳಿದ ಯುವಕರು ಹೊರಗುಳಿದಿರುವುದನ್ನು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಸ್ವಾಗತಿಸುತ್ತದೆ. ಭವಿಷ್ಯದ ದಿನಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ಯುವಜನತೆ ಸಂಘಪರಿವಾರದ ಎಲ್ಲ ರೀತಿಯ ಚಟುವಟಿಗಳಿಂದ ಹೊರಬಂದು ಸಂವಿಧಾನದ ಆಶಗಳ ಜೊತೆಯಲ್ಲಿ ನಮ್ಮೊಂದಿಗೆ ಕೈಜೋಡಿಸುತ್ತಾರೆ ಎಂಬ ಭರವಸೆಯಿದೆ.
ಚಲೋ ಉಡುಪಿ ಚಳವಳಿಯು ಹಾಕಿಕೊಂಡಿರುವ ಧ್ಯೇಯದಂತೆ ಮುಂದಿನ ದಿನಗಳಲ್ಲಿ ನಮ್ಮ ಸಮಿತಿಯು ಬಡವರವ ಭೂಮಿ ಹಕ್ಕು ಮತ್ತು ಆಹಾರದ ಆಯ್ಕೆಗೆ ಸಂಬಂಧಿಸಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬೇಡಿಕೆ ಒಳಗೊಂಡಂತೆ ದಲಿತ ದಮನಿತರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಂದೋಲನವನ್ನು ಕಟ್ಟಲಿದೆ. ನಾಡಿನ ಎಲ್ಲಾ ದಲಿತ- ದಮನಿತ ಹಾಗೂ ಪ್ರಗತಿಪರ ಶಕ್ತಿಗಳೆಲ್ಲರೂ ಈ ಪ್ರಯತ್ನದಲ್ಲಿ ಕೈಜೋಡಿಸಬೇಕು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.







