ಜುಗಾರಿ ಅಡ್ಡೆಗೆ ದಾಳಿ: 9 ಮಂದಿಯ ಬಂಧನ

ಪುತ್ತೂರು, ಅ.24: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಗುಡ್ಡೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಸಂಪ್ಯ ಪೊಲೀಸರು ರವಿವಾರ ಸಂಜೆ ದಾಳಿ ನಡೆಸಿ ಆಟದಲ್ಲಿ ನಿರತರಾಗಿದ್ದ 9 ಮಂದಿಯನ್ನು ಬಂಧಿಸಿದ್ದಾರೆ. 11 ಮೊಬೈಲ್ ಹಾಗೂ ಆಟಕ್ಕೆ ಬಳಸಿದ್ದ 10,715 ರೂ.ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುರಿಂಜಿ ನಿವಾಸಿ ಕೃಷ್ಣ ಮಣಿಯಾಣಿ ಅವರ ಪುತ್ರ ವಿಶ್ವನಾಥ ಮಣಿಯಾಣಿ(28), ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಮದಕ ನಿವಾಸಿ ನಾರಾಯಣ ರೈ ಅವರ ಪುತ್ರ ರಾಜೇಶ್ ರೈ(41), ಮಾಡ್ನೂರು ಗ್ರಾಮದ ಮಾಣಿಯಡ್ಕ ನಿವಾಸಿ ಬಾಬು ಅವರ ಪುತ್ರ ಪ್ರಕಾಶ್(39), ಮಾಡ್ನೂರು ಗ್ರಾಮದ ಮಂಜಿಕೋಟೆ ನಿವಾಸಿ ಪದ್ಮ ಪೂಜಾರಿ ಅವರ ಪುತ್ರ ಸುಂದರ ಪೂಜಾರಿ(34), ಸುಳ್ಯ ತಾಲೂಕಿನ ಕಲ್ಲುಮಟ್ಟು ನಿವಾಸಿ ರಾಮಣ್ಣ ಗೌಡ ಅವರ ಪುತ್ರ ಆನಂದ ಗೌಡ ಎಂ. (45), ಜಾಲ್ಸೂರಿನ ಸುಬ್ಬಣ್ಣ ನಾಯ್ಕ ಅವರ ಪುತ್ರ ದಯಾನಂದ ಎಂ.ಎಸ್. (27) ಸುಳ್ಯ ಬೆಳಿಯೂರು ನಿವಾಸಿ ರಾಮಚಂದ್ರ ಮಣಿಯಾಣಿ ಅವರ ಪುತ್ರ ಗಣೇಶ್ ಪಿ.ಆರ್. (28), ಆಲೆಟ್ಟಿ ಗ್ರಾಮದ ಕುಂಚಡ್ಕ ನಿವಾಸಿ ವಾಸುದೇವ ಅವರ ಪುತ್ರ ದೀಕ್ಷಿತ್ (21), ಜಾಲ್ಸೂರು ಬೈದರಕೊಳಂಜಿ ನಿವಾಸಿ ಬೊಗ್ಗ ಅವರ ಪುತ್ರ ಬಿ.ಜೋಗಿ (45) ಬಂಧಿತ ಆರೋಪಿಗಳು.
ಅರಿಯಡ್ಕ ಗ್ರಾಮದ ಕೌಡಿಚ್ಚಾರು ಎಂಬಲ್ಲಿರುವ ಪ್ರಶಾಂತ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಿಂಬದಿಯಲ್ಲಿರುವ ಅಡಿಕೆ ತೋಟದ ಬದಿಯ ಗುಡ್ಡೆಯಲ್ಲಿ ಜುಗಾರಿ ಅಡ್ಡೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಠಾಣಾ ಎಸ್ಸೈ ಅಬ್ದುಲ್ ಖಾದರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಎಎಸ್ಸೈಗಳಾದ ರುಕ್ಮ ನಾಯ್ಕ ಮತ್ತು ತಿಮ್ಮಪ್ಪ ಗೌಡ, ಕಾನ್‌ಸ್ಟೇಬಲ್‌ಗಳಾದ ದಿನೇಶ್, ಕರುಣಾಕರ, ವಿನಯಕುಮಾರ್, ನಾಗರಾಜಪ್ಪ, ಬಸವರಾಜ್ ಈ ಕಾರ್ಯಾಚರಣೆಯಲ್ಲಿದ್ದರು.





